• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 25-08-2022

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳು 2023

img-icon

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳು 2023: ಎಸ್.ಎಸ್.ಎಲ್.ಸಿ. ಪರೀಕ್ಷೆಯು ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಅಂತಿಮ ಹಾಗೂ ಪ್ರಮುಖ ಘಟ್ಟವಾಗಿದೆ. ಗುಣಮಟ್ಟವನ್ನು ಕಾಯ್ದುಕೊಂಡು ಪಾರದರ್ಶಕವಾಗಿ ಪರೀಕ್ಷೆಯನ್ನು ನಡೆಸುವುದು ಶಿಕ್ಷಣ ಇಲಾಖೆಯ ಕರ್ತವ್ಯವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಈ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿದ್ದು, ಪರೀಕ್ಷಾ ಕೇಂದ್ರಗಳ ರಚನೆಯಲ್ಲೂ ಸಹ ಸಾಕಷ್ಟು ನಿಯಮ ಮತ್ತು ಪ್ರಕ್ರಿಯೆಗಳನ್ನು ಅನುಸರಿಸುತ್ತದೆ.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪರೀಕ್ಷಾ ಕಾರ್ಯಚಟುವಟಿಕೆಗಳನ್ನು ಗಣಕೀಕರಣಗೊಳಿಸಿರುವುದು ಒಂದು ಮಹತ್ತರ ಮೈಲಿಗಲ್ಲಾಗಿದೆ. ಶೈಕ್ಷಣಿಕ ವರ್ಷದ ಪರೀಕ್ಷಾ ಕಾರ್ಯಚಟುವಟಿಕೆಗಳು ವಿದ್ಯಾರ್ಥಿಗಳ ವಿವರಗಳನ್ನು ಮಂಡಳಿಯ ಜಾಲತಾಣದಲ್ಲಿ ಸಲ್ಲಿಸುವುದರ ಮೂಲಕ ಪ್ರಾರಂಭವಾಗುತ್ತವೆ. ಸದರಿ ಮಾಹಿತಿಯ ಆಧಾರದ ಮೇಲೆ ಪರೀಕ್ಷಾ ಕೇಂದ್ರಗಳ ರಚನೆಯ ಪ್ರಕ್ರಿಯೆಯು ಆರಂಭವಾಗುತ್ತದೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳ ರಚನೆ

ಒಂದು ಭೌಗೋಳಿಕ ಪ್ರದೇಶದಲ್ಲಿನ ನಗರ/ಗ್ರಾಮೀಣ ಪ್ರದೇಶದ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಪರಿಗಣಿಸಿ ಕ್ಲಸ್ಟರ್‌ ಸಹಿತ ಹಾಗೂ ಕ್ಲಸ್ಟರ್‌ ರಹಿತ ಪರೀಕ್ಷಾ ಕೇಂದ್ರಗಳನ್ನು ರಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಜಿಲ್ಲಾ ಉಪನಿರ್ದೇಶಕರು ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು/ಜಿಲ್ಲಾ ನೋಡಲ್ ಅಧಿಕಾರಿಗಳು ಪ್ರಸ್ತಾಸಿದ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ಖಾತರಿಪಡಿಸಿಕೊಂಡು ಪರೀಕ್ಷಾ ಕೇಂದ್ರಗಳ ರಚನೆಯ ಪ್ರಸ್ತಾವನೆಗಳನ್ನು ಅನುಮೋದಿಸುತ್ತಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ತರಗತಿ ಕೋಣೆಗಳು, ಆಸನದ ವ್ಯವಸ್ಥೆಗಾಗಿ ಪೀಠೋಪಕರಣಗಳು, ಶಾಲೆಯ ಸುತ್ತಲೂ ಕಾಂಪೌಂಡ್, ಶೌಚಾಲಯ, ಕುಡಿಯುವ ನೀರು, ಸಿಸಿಟಿವಿ ಕ್ಯಾಮರಾ ಅಳವಡಿಸಿರುವಿಕೆ, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾರಿಗೆ ವ್ಯವಸ್ಥೆ, ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದಲ್ಲಿ ಸುರಕ್ಷಿತವಾಗಿ ಪ್ರಶ್ನೆಪತ್ರಿಕೆಗಳನ್ನು ವಿತರಿಸಲು ರಸ್ತೆ ಮಾರ್ಗ ಇತ್ಯಾದಿ ಸೌಲಭ್ಯಗಳು ಇರುವ ಬಗ್ಗೆ ಪರಿಶೀಲಿಸಲಾಗುತ್ತದೆ.

ಪರೀಕ್ಷಾ ಕೇಂದ್ರಗಳನ್ನು ರಚಿಸಲು ಪರಿಶೀಲಿಸಲಾಗುವ ನಿಯಮಗಳು

ಗ್ರಾಮೀಣ/ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ಲಸ್ಟರ್‌ ಸಹಿತ/ಕ್ಲಸ್ಟ‌ರ್‌ ರಹಿತ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗುತ್ತದೆ.

ಶಾಲೆ/ಕಾಲೇಜಿನ ಮೂಲಭೂತ ಸೌಕರ್ಯ ಹಾಗೂ ಕೊಠಡಿ ಸಂಖ್ಯೆಗಳನ್ನು ಆಧರಿಸಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 250 ಅಭ್ಯರ್ಥಿಗಳು ಹಾಗೂ ಗರಿಷ್ಠ 700 ಅಭ್ಯರ್ಥಿಗಳವರೆಗೂ ಆಸನದ ವ್ಯವಸ್ಥೆ ಇರುವ ಸಾಮರ್ಥ್ಯವನ್ನು ಪರಿಗಣಿಸಿ ನಗರ/ಗ್ರಾಮೀಣ ಪ್ರದೇಶದಲ್ಲಿ 2 ರಿಂದ 4 ಕಿ.ಮೀ. ತ್ರಿಜ್ಯದೊಳಗೆ ಬರುವ ಪರೀಕ್ಷಾ ಕೇಂದ್ರಗಳನ್ನು ಕ್ಲಸ್ಟರ್‌ ಸಹಿತ ಪರೀಕ್ಷಾ ಕೇಂದ್ರಗಳನ್ನಾಗಿ ರಚಿಸಲಾಗುತ್ತದೆ.

ಗ್ರಾಮಾಂತರ ಪ್ರದೇಶದ ಶಾಲೆಗಳು ತಾಲ್ಲೂಕು/ಜಿಲ್ಲಾ ಕೇಂದ್ರಗಳಿಗೆ ದೂರವಿದ್ದು, ಬಸ್ಸಿನ ಅನಾನುಕೂಲವಿದ್ದಲ್ಲಿ, ಹಾಗೂ ಕ್ಲಸ್ಟರ್‌ ಸಹಿತ ಪರೀಕ್ಷಾ ಕೇಂದ್ರಗಳನ್ನು ರಚಿಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಕ್ಲಸ್ಟರ್‌ ರಹಿತ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗುತ್ತದೆ..

ಗರಿಷ್ಠ ಸಾಮರ್ಥ್ಯವಿರುವ ಪರೀಕ್ಷಾ ಕೇಂದ್ರಗಳಿಗೆ ಪ್ರತಿ 350 ವಿದ್ಯಾರ್ಥಿಗಳಿಗೆ ಒಬ್ಬರಂತೆ ಮುಖ್ಯ ಅಧೀಕ್ಷಕರನ್ನು, 351 ರಿಂದ 550 ವಿದ್ಯಾರ್ಥಿಗಳಿದ್ದಲ್ಲಿ ಒಬ್ಬ ಮುಖ್ಯ ಅಧೀಕ್ಷಕರು ಮತ್ತು ಒಬ್ಬ ಉಪ ಮುಖ್ಯ ಅಧೀಕ್ಷಕರನ್ನು ಹಾಗೂ ಗರಿಷ್ಠ 700 ವಿದ್ಯಾರ್ಥಿಗಳಿಗೆ ಒಬ್ಬ ಮುಖ್ಯ ಅಧೀಕ್ಷಕರು ಮತ್ತು ಇಬ್ಬರು ಉಪ ಮುಖ್ಯ ಅಧೀಕ್ಷಕರನ್ನು ನೇಮಕ ಮಾಡಲಾಗುತ್ತದೆ.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಪ್ರಶ್ನೆಪತ್ರಿಕೆ ಹಾಗೂ ಉತ್ತರಪತ್ರಿಕೆಗಳನ್ನು ಸಂರಕ್ಷಿಸಲು ಹಾಗೂ ಪ್ರಶ್ನೆ ಪತ್ರಿಕೆಗಳ ಲೆಕ್ಕಾಚಾರ ನಿರ್ವಹಿಸಲು ಒಬ್ಬ ಕಸ್ಟೋಡಿಯನ್ (ಪ್ರಶ್ನೆಪತ್ರಿಕೆ ಮತ್ತು ಉತ್ತರಪತ್ರಿಕೆ ಅಭಿರಕ್ಷಕರು) ಅನ್ನು ಪ್ರೌಢಶಾಲಾ ಮುಖ್ಯ ಶಿಕ್ಷಕರು/ಸಹ ಶಿಕ್ಷಕರ ವೃಂದದಿಂದ ನೇಮಕ ಮಾಡಲಾಗುತ್ತದೆ. 

ಗ್ರಾಮಾಂತರ ಪ್ರದೇಶದಲ್ಲೇ ಹೆಚ್ಚು ಶಾಲೆಗಳಿದ್ದಲ್ಲಿ, ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ, ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗುತ್ತದೆ. ಎರಡು ಪರೀಕ್ಷಾ ಕೇಂದ್ರಗಳಿಗಿಂತ ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ಮಾಡಲು ಅವಕಾಶವಿದ್ದಲ್ಲಿ ಕ್ಲಸ್ಟರ್ ಸಹಿತ ಪರೀಕ್ಷಾ ಕೇಂದ್ರಗಳನ್ನಾಗಿ ಮಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗುತ್ತದೆ.

ಪರೀಕ್ಷಾ ಕೇಂದ್ರದಲ್ಲಿ ಅವ್ಯವಹಾರಕ್ಕೆ ಕ್ರಿಮಿನಲ್ ಮೊಕದ್ದಮೆ

  • ಅಭ್ಯರ್ಥಿಯು ಉತ್ತರ ಪತ್ರಿಕೆಯನ್ನು (ANSWER BOOKLET) ಪರೀಕ್ಷಾ ಕೊಠಡಿಯಿಂದ ಹೊರಗೆ ಕೊಂಡೊಯ್ಯುವಂತಿಲ್ಲ. ಅಲ್ಲದೇ ಮಂಡಳಿ ನಿಗದಿಪಡಿಸಿದ ಅವಧಿಗಿಂತ ಮುಂಚೆ ಕೊಠಡಿಯಿಂದ ಹೊರಹೋಗುವಂತಿಲ್ಲ.
  • ವಿದ್ಯಾರ್ಥಿಯ ಪರವಾಗಿ ನಕಲಿ ಅಭ್ಯರ್ಥಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ (Impersonation) ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಇವರ ವಿರುದ್ಧ ಹತ್ತಿರದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಮಂಡಳಿಗೆ ವರದಿ ನೀಡಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಮೌಲ್ಯಮಾಪನ ಮಾಡಿ ಕಳುಹಿಸಿದ ಪ್ರಕರಣಗಳನ್ನು ಅವ್ಯವಹಾರಕ್ಕೊಳಪಟ್ಟ ಪ್ರಕರಣಗಳೆಂದು ಪರಿಗಣಿಸಲಾಗುವುದು. ಈ ಎರಡು ಪ್ರಕರಣಗಳಲ್ಲಿ ಮುಖ್ಯ ಅಧೀಕ್ಷಕರನ್ನ ಜವಾಬ್ದಾರರನ್ನಾಗಿಸಲಾಗುತ್ತದೆ. 
  • ಪರೀಕ್ಷಾ ಕೇಂದ್ರದಲ್ಲಿ ಪತ್ತೆ ಮಾಡಲ್ಪಟ್ಟ ನಕಲು ಮಾಡುವಿಕೆ, ಉತ್ತರ ಪತ್ರಿಕೆ ಹರಿದು ಹಾಕುವುದು ಇತ್ಯಾದಿ ಅವ್ಯವಹಾರಗಳ ಬಗ್ಗೆ ದಾಖಲೆಗಳೊಂದಿಗೆ ವರದಿಯನ್ನು ನೇರವಾಗಿ ಮಂಡಳಿಯ ನಿರ್ದೇಶಕರ ವೈಯಕ್ತಿಕ ವಿಳಾಸಕ್ಕೆ ನೋಂದಣಿ ಅಂಚೆಯ ಮೂಲಕ ತಪ್ಪದೇ ಅದೇ ದಿನವೇ ಕಳುಹಿಸಲಾಗುತ್ತದೆ.
  • ನಕಲು ಅವ್ಯವಹಾರಕ್ಕೆ ಒಳಪಟ್ಟ ಮೂಲ ಉತ್ತರ ಪತ್ರಿಕೆಯಲ್ಲಿ, ಕೆಂಪು ಶಾಹಿಯಲ್ಲಿ, MLP ಎಂದು ಬರೆದು ಮುಖ್ಯ ಅಧೀಕ್ಷಕರು ದೃಢೀಕರಿಸುತ್ತಾರೆ. 
  • ಅಭ್ಯರ್ಥಿ ಅವ್ಯವಹಾರದಲ್ಲಿ ಭಾಗಿಯಾದಾಗ ಉಪಯೋಗಿಸಲ್ಪಟ್ಟ ಮೂಲ ಉತ್ತರ ಪತ್ರಿಕೆ, ಚೀಟಿ, ಪುಸ್ತಕ, ಗೈಡ್, ನಕ್ಷೆ ಇತ್ಯಾದಿ ಪೂರಕ ದಾಖಲೆಗಳು, ಅಭ್ಯರ್ಥಿಯ ಮೂಲ ಪ್ರವೇಶ ಪತ್ರ ಮತ್ತು ಅಭ್ಯರ್ಥಿಯ ಹೇಳಿಕೆ, ಅವ್ಯವಹಾರವನ್ನು ಪತ್ತೆ ಹಚ್ಚಿದ ಅಧಿಕಾರಿಯ ಹೆಸರು, ಪದನಾಮ ಮತ್ತು ವಿಳಾಸ, ಕೊಠಡಿ ಮೇಲ್ವಿಚಾರಕರ ಮತ್ತು ಮುಖ್ಯ ಅಧೀಕ್ಷಕರ ಲಿಖಿತ ಹೇಳಿಕೆ ಮುಂತಾದ ದಾಖಲೆಗಳನ್ನು ಪ್ರತ್ಯೇಕ ಬಂಡಲ್ ಮಾಡಿ ಪರೀಕ್ಷಾ ಕೇಂದ್ರದ ಸಂಖ್ಯೆ, ಕೇಂದ್ರದ ಹೆಸರು ಮತ್ತು ವಿಳಾಸ, ವಿಷಯ ಸಂಕೇತ, ದಿನಾಂಕಗಳನ್ನು ನಮೂದಿಸಿ ಬಂಡಲ್‌ ಅನ್ನು ಮೊಹರು ಮಾಡಿ ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-3 ಇವರ ವಿಳಾಸಕ್ಕೆ ಆಯಾ ದಿನವೇ ಕಳುಹಿಸಲಾಗುತ್ತದೆ.

ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ನಡೆಯುವ ಅಷ್ಟೂ ದಿನಗಳ ಕಾಲ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಪರೀಕ್ಷಾ ಕೇಂದ್ರದ ಸುತ್ತ ಇರುವ ಜೆರಾಕ್ಸ್, ಕಂಪ್ಯೂಟರ್ ಸೆಂಟರ್, ಸೈಬರ್ ಸೆಂಟರ್‌ಗಳನ್ನು ಮುಚ್ಚುವಂತೆ ಆದೇಶಿಸಲಾಗುತ್ತದೆ. 

ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಸಂಸ್ಥೆಯು ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುವ ದಿನಾಂಕಗಳಲ್ಲಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಗಳವರೆಗೆ ಮತ್ತು ಪರೀಕ್ಷಾ ಕೇಂದ್ರಗಳಿಂದ ವಾಸಸ್ಥಳಗಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಪ್ರವೇಶ ಪತ್ರವನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುತ್ತದೆ.. 

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರಕ್ರಿಯೆಯ ಗಣಕೀಕರಣ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌.ಎಸ್‌.ಎಲ್‌.ಸಿ. ಪರೀಕ್ಷಾ ಪ್ರಕ್ರಿಯೆಯ ಬಹುಭಾಗವನ್ನು ಗಣಕೀಕರಣಗೊಳಿಸಿದೆ. ಶೈಕ್ಷಣಿಕ ವರ್ಷದ ಪರೀಕ್ಷಾ ಕಾರ್ಯಚಟುವಟಿಕೆಗಳ ಆರಂಭದಲ್ಲಿ ವಿದ್ಯಾರ್ಥಿಗಳ ವಿವರಗಳನ್ನು ಮಂಡಳಿಯ ಜಾಲತಾಣದಲ್ಲಿ ಶಾಲೆಯ ವತಿಯಿಂದ ಸಲ್ಲಿಸಲಾಗುತ್ತದೆ. ಸದರಿ ಮಾಹಿತಿಯ ಆಧಾರದ ಮೇಲೆ ಪರೀಕ್ಷಾ ಕೇಂದ್ರಗಳ ರಚನೆಯ ಪ್ರಕ್ರಿಯೆಯು ಆರಂಭವಾಗುತ್ತದೆ.

ನಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅಗತ್ಯವಿರುವ ಪ್ರವೇಶ ಪತ್ರಗಳನ್ನು ಸಿದ್ಧಪಡಿಸಿ, ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ನಂತರ ಮಂಡಳಿಯ ವೆಬ್‌ಸೈಟ್‌ನಿಂದ ಮುಖ್ಯ ಶಿಕ್ಷಕರು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

 ಉತ್ತರ ಪತ್ರಿಕೆಗಳು ಮೌಲ್ಯಮಾಪನಗೊಂಡ ನಂತರ ಅಂಕಗಳನ್ನು ಜಿಲ್ಲಾ ಕೇಂದ್ರದ ಮೌಲ್ಯಮಾಪನ ಕೇಂದ್ರದಿಂದಲೇ ನೇರವಾಗಿ ಮಂಡಳಿಯ ವೆಬ್‌ಸೈಟ್‌ಗೆ ಲಾಗಿನ್ ಆಗಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ದಾಖಲು ಮಾಡುವುದರ ಮೂಲಕ ಮಾನವ ಶ್ರಮ ಮತ್ತು ಸಮಯದ ಉಳಿತಾಯವಾಗುತ್ತಿದೆ. ಈ ಮೂಲಕ ಮೌಲ್ಯಮಾಪನದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ.

ಶಾಲಾವಾರು ಫಲಿತಾಂಶವನ್ನು ಶಾಲಾ ಮುಖ್ಯ ಶಿಕ್ಷಕರ ಲಾಗಿನ್‌ಗೆ ಅಂತರ್ಜಾಲದಲ್ಲಿ ನೇರವಾಗಿ ರವಾನಿಸಲಾಗುತ್ತಿದೆ. ಅಲ್ಲದೇ ಉತ್ತೀರ್ಣರಾದ ವಿದ್ಯಾರ್ಥಿಗಳ ಫಲಿತಾಂಶವನ್ನು ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಮೂಲಕ ರವಾನೆ ಮಾಡುವುದಲ್ಲದೆ ಡಿಜಿಲಾಕರ್‌ನಲ್ಲೂ ಪ್ರಕಟಿಸಲಾಗುತ್ತಿರುವುದು ಮಂಡಳಿಯ ಮಹತ್ವದ ಸಾಧನೆಯಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿರುವ ಭಾಷೆಗಳು ಹಾಗೂ ವಿಷಯಗಳು

ಎಸ್.ಎಸ್.ಎಲ್.ಸಿ. ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಮೂರು (03) ಭಾಷೆಗಳು ಹಾಗೂ ಮೂರು (03) ಕೋರ್ ವಿಷಯಗಳನ್ನು ಅಭ್ಯಾಸ ಮಾಡಿ, ಪರೀಕ್ಷೆ ಬರೆಯಬೇಕು.


ಸರ್ಕಾರದ ಭಾಷಾ ನೀತಿಯಂತೆ ಪರೀಕ್ಷಾ ಮಂಡಳಿ ನಿಗದಿಪಡಿಸಿರುವ 8 ಪ್ರಥಮ ಭಾಷೆಗಳಲ್ಲಿ ಯಾವುದಾದರೂ ಒಂದನ್ನು ಪ್ರಥಮ ಭಾಷೆಯಾಗಿ, ನಿಗದಿಪಡಿಸಿರುವ 2 ದ್ವಿತೀಯ ಭಾಷೆಗಳಲ್ಲಿ ಯಾವುದಾದರೂ ಒಂದನ್ನು ದ್ವಿತೀಯ ಭಾಷೆಯಾಗಿ ಮತ್ತು ನಿಗದಿಪಡಿಸಿರುವ 9 ತೃತೀಯ ಭಾಷೆಗಳಲ್ಲಿ ಯಾವುದಾದರೂ ಒಂದನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡು ಪರೀಕ್ಷಾ ಮಂಡಳಿ ನಿಗದಿಪಡಿಸಿರುವ ಭಾಷಾ ಸಂಯೋಜನೆಯಂತೆ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಪ್ರಥಮ ಮತ್ತು ದ್ವಿತೀಯ ಭಾಷೆಗಳಲ್ಲಿ ಯಾವುದಾದರೂ ಒಂದನ್ನು ಕನ್ನಡ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡ ಭಾಷೆಯನ್ನು ದ್ವಿತೀಯ ಅಥವಾ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಬಾರದು.

ಎನ್.ಎಸ್.ಕ್ಯೂ.ಎಫ್. ಯೋಜನೆಯಡಿಯಲ್ಲಿ ವೃತ್ತಿ ಶಿಕ್ಷಣ ವಿಷಯವನ್ನು ತೆಗೆದುಕೊಂಡ ಅಭ್ಯರ್ಥಿಗಳಿಗೆ ತೃತೀಯ ಭಾಷೆಗೆ ವಿನಾಯಿತಿಯನ್ನು ನೀಡಲಾಗುತ್ತದೆ. ವೃತ್ತಿ ಶಿಕ್ಷಣ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್‌ಕೇ‌ರ್‌ ಮತ್ತು ಬ್ಯೂಟಿ & ವೆಲ್‌ನೆಸ್, ಐದು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ತೃತೀಯ ಭಾಷೆಗೆ ಪರ್ಯಾಯವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಆಸನ ವ್ಯವಸ್ಥೆ ಹೇಗಿರುತ್ತದೆ?

ಉತ್ತರ: ಶಾಲಾ ವಿದ್ಯಾರ್ಥಿಗಳು, ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಪ್ರತಿ ಕೇಂದ್ರಕ್ಕೆ 250 ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲದಂತೆ, ಹಾಗೂ ಕೆಲವು ವಿಶೇಷ ಪ್ರಕರಣಗಳನ್ನು ಹೊರತುಪಡಿಸಿ 700ಕ್ಕಿಂತ ಹೆಚ್ಚಾಗದಂತೆ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ವಿದ್ಯಾರ್ಥಿಯೂ ಸಹ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯದಂತೆ, ಪ್ರತಿ ಕೊಠಡಿಯಲ್ಲಿ ಅದರ ಉದ್ದ ಮತ್ತು ಅಗಲಗಳನ್ನು ಆಧರಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ಅಡಚಣೆಯಾಗದಂತೆ ಆಸನ ವ್ಯವಸ್ಥೆ ಮಾಡಲಾಗುತ್ತದೆ. 

ಪ್ರ. 2: ಪೀಠೋಪಕರಣಗಳ ಕೊರತೆ ಇದ್ದಲ್ಲಿ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯಲು ಅವಕಾಶ ಇದೆಯೇ?

ಉತ್ತರ: ಇಲ್ಲ. ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪೀಠೋಪಕರಣಗಳ ಕೊರತೆ ಇದ್ದಲ್ಲಿ ಸಂಬಂಧಿಸಿದ ಪರೀಕ್ಷಾ ಕೇಂದ್ರಕ್ಕೆ ಸಂಯೋಜಿಸಿರುವ ಶಾಲೆಯಿಂದ ಪಡೆಯಬೇಕಾಗುತ್ತದೆ. ಈ ಸಂಬಂಧವಾಗಿ ಮಂಡಳಿಯಿಂದ ಯಾವುದೇ ವಿಧವಾದ ಸಾಗಾಣಿಕೆ ವೆಚ್ಚ ಹಾಗೂ ಪೀಠೋಪಕರಣಗಳ ಬಾಡಿಗೆಯನ್ನು ನೀಡಲಾಗುವುದಿಲ್ಲ. 

ಪ್ರ. 3: ಸ್ಥಳಾವಕಾಶದ ಕೊರತೆಯಿಂದ ಬಯಲಿನಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆಯೇ?

ಉತ್ತರ: ಪರೀಕ್ಷಾರ್ಥಿಗಳು ಯಾವುದೇ ಕಾರಣಕ್ಕೂ ಬಯಲಿನಲ್ಲಿ ಪರೀಕ್ಷೆ ಬರೆಯದಂತೆ ಮುಖ್ಯ ಅಧೀಕ್ಷಕರು ಮುಂಜಾಗ್ರತೆ ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ದ್ವಾರದ ಕಡೆಗೆ ಮುಖ ಮಾಡಿಕೊಂಡು ಕುಳಿತುಕೊಳ್ಳುತ್ತಾರೆ. ಇದನ್ನು ತಪ್ಪಿಸಲು ವಿರುದ್ಧವಾಗಿ ಮುಖ ಮಾಡಿ ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆಯನ್ನು ಸಜ್ಜು ಮಾಡಲಾಗುತ್ತದೆ. 

ಪ್ರ. 4: ಪರೀಕ್ಷಾ ಕೇಂದ್ರಕ್ಕೆ ಕೈಗಡಿಯಾರ ಕಟ್ಟಿಕೊಂಡು ಬರಲು ಅವಕಾಶ ಇದೆಯೇ?

ಉತ್ತರ: ಪರೀಕ್ಷಾ ಕೇಂದ್ರದ ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷಾರ್ಥಿಗಳಿಗೆ ಅನಲಾಗ್/ಮೆಕ್ಯಾನಿಕಲ್ ವಾಚ್ (ಕೈಗಡಿಯಾರ) ಹಾಕಿಕೊಂಡು ಬರಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾರ್ಥಿಗಳು ಡಿಜಿಟಲ್ ಹಾಗೂ ಸ್ಮಾರ್ಟ್ ವಾಚ್ ಹಾಕಿಕೊಂಡು ಪರೀಕ್ಷಾ ಕೊಠಡಿಗೆ ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 

ಪ್ರ. 5: ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬರುವ ಪರೀಕ್ಷಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆಯೇ?

ಉತ್ತರ: ಇಲ್ಲ. ಪರೀಕ್ಷೆ ಪ್ರಾರಂಭವಾಗುವ ಬೆಳಿಗ್ಗೆ 9.45ರ ನಂತರ ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪ್ರವೇಶವನ್ನು ನಿಷೇಧಿಸಲಾಗಿದೆ.

ಪ್ರ. 6: ಅರ್ಭರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಹೋಗಲು ಬಯಸಿದಲ್ಲಿ?

ಉತ್ತರ: ಅಭ್ಯರ್ಥಿಯು ಪರೀಕ್ಷೆ ಪ್ರಾರಂಭವಾದ ಅರ್ಧ ಗಂಟೆಯವರೆಗೂ ಪರೀಕ್ಷಾ ಕೊಠಡಿಯಲ್ಲಿ ಇರುವುದು ಕಡ್ಡಾಯವಾಗಿದೆ. ನಂತರ ಅಭ್ಯರ್ಥಿಯು ಪರೀಕ್ಷಾ ಕೊಠಡಿಯಿಂದ ಹೊರಹೋಗಲು ಬಯಸಿದಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಅಭ್ಯರ್ಥಿಯಿಂದ ಪಡೆದು ಪರೀಕ್ಷಾ ಕೊಠಡಿಯಿಂದ ಹೊರಗೆ ಕಳುಹಿಸಲಾಗುತ್ತದೆ. 

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳು 2023 ಕುರಿತು ಎಲ್ಲಾ ಅಗತ್ಯ ಮಾಹಿತಿಯನ್ನು ನಿಮಗೆ ಒದಗಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಯೋಜಿಸುತ್ತಿರುವ ಅಭ್ಯರ್ಥಿಗಳು Embibe ನಲ್ಲಿ ಎಸ್‌ಎಸ್ಎಲ್‌ಸಿ ಲರ್ನ್ ನೋಡಿ. ನಿಮ್ಮ ಪಠ್ಯಕ್ರಮಕ್ಕೆ ಮ್ಯಾಪ್ ಮಾಡಲಾದ 3D ವಿಡಿಯೋಗಳನ್ನು ನೋಡುತ್ತಾ ಪಠ್ಯಗಳನ್ನು ಕಲಿಯಿರಿ. ಬಳಿಕ ಅಣಕು ಟೆಸ್ಟ್‌ ತೆಗೆದುಕೊಂಡು ನೀವು ಎಲ್ಲಿ ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ಗುರುತಿಸಿಕೊಳ್ಳಿ. ವಾಸ್ತವಿಕ ಪರೀಕ್ಷೆಗಿಂತ ಮುನ್ನ ನಿಮ್ಮ ತಪ್ಪುಗಳನ್ನು ಗುರುತಿಸಿಕೊಳ್ಳುವುದು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈಯುವುದರ ಮೊದಲ ಹೆಜ್ಜೆಯಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳು 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳು 2023” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ