• ಲೇಖಕರು Divyashree K
  • ಕಡೆಯ ಪರಿಷ್ಕರಣೆ 25-08-2022

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ಅಧಿಸೂಚನೆ

img-icon

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿಯ ಶಾಲಾ ಜೀವನದ ಪ್ರಮುಖ ಘಟ್ಟವಾಗಿದೆ. 1 ರಿಂದ 10ನೇ ತರಗತಿಯವರೆಗೆ 10 ವರ್ಷಗಳ ಶಾಲಾ ಹಂತದ ಅಧ್ಯಯನವು ವಿದ್ಯಾರ್ಥಿಗಳಿಗೆ ಸಾಕಷ್ಟು ಜ್ಞಾನ ಒದಗಿಸುವ ಜೊತೆಗೆ, ಅವರನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಮಹತ್ವದ ಘಟ್ಟವಾಗಿದ್ದು, ಈ ಹಂತದ ಫಲಿತಾಂಶವು ಮುಂದಿನ ಶಿಕ್ಷಣದ ಪ್ರವೇಶ ಪ್ರಕ್ರಿಯೆಯಲ್ಲಿ ನಿರ್ಣಾಯಕ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. 

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(KSEEB)ಯು ಆಯಾ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಪರೀಕ್ಷೆಗಳು, ಪರೀಕ್ಷೆ ಅರ್ಜಿ, ಪರೀಕ್ಷೆ ವೇಳಾಪಟ್ಟಿ, ಫಲಿತಾಂಶ, ಮರುಎಣಿಕೆ ಮತ್ತು ಮರುಮೌಲ್ಯಮಾಪನ, ಪೂರಕ ಪರೀಕ್ಷೆ ಮತ್ತು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಅಧಿಸೂಚನೆಗಳನ್ನು ಹೊರಡಿಸುತ್ತದೆ. ಈ ಅಧಿಸೂಚನೆಗಳು ಮತ್ತು ಸುತ್ತೋಲೆಗಳ ಕುರಿತ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಅಧಿಸೂಚನೆ 2022-2023 

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪ್ರತಿವರ್ಷ ಮಾರ್ಚ್‌/ಏಪ್ರಿಲ್‌ ತಿಂಗಳಿನಲ್ಲಿ ನಡೆಸುತ್ತದೆ. ಈ ಪರೀಕ್ಷೆಗೆ ಸಂಬಂಧಿಸಿದಂತೆ ಸುಮಾರು 5 ತಿಂಗಳು ಮುಂಚಿತವಾಗಿ ಮಂಡಳಿಯು ತನ್ನ ಅಧಿಕೃತ ವೆಬ್‌ಸೈಟ್‌ ಲಿಂಕ್‌ನಲ್ಲಿ ಅಧಿಸೂಚನೆಯನ್ನು ಹೊರಡಿಸುತ್ತದೆ. ಈ ಅಧಿಸೂಚನೆಯಲ್ಲಿ ಪರೀಕ್ಷೆಯ ಅರ್ಜಿಗಳ ಸ್ವರೂಪ, ಪರೀಕ್ಷಾ ಶುಲ್ಕ ನಿಗದಿ, ಪರೀಕ್ಷಾ ಶುಲ್ಕ ವಿನಾಯಿತಿ, ಶುಲ್ಕ ಪಾವತಿ, ನೋಂದಣಿ, ಪರೀಕ್ಷೆಯ ಅಂಕಗಳು ಮತ್ತು ಶ್ರೇಣಿಗಳ ವಿವರ ಸೇರಿದಂತೆ ಸಾಕಷ್ಟು ಮಾಹಿತಿಯನ್ನು ಒದಗಿಸಲಾಗಿರುತ್ತದೆ. ಈ ಅಧಿಸೂಚನೆಗೆ ಸಂಬಂಧಿಸಿದ ಮುಖ್ಯ ಅಂಶಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23ರ ಮುಖ್ಯ ವಿವರ 

ಮಂಡಳಿಯ ಹೆಸರುಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB)
ಪರೀಕ್ಷೆ ಹೆಸರುಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ
ಅವಧಿ2022-23
ಲೇಖನದ ವಿಷಯಎಸ್‌ಎಸ್‌ಎಲ್‌ಸಿ 2022-23: ಅಧಿಸೂಚನೆಗಳು
ಪರೀಕ್ಷೆ ದಿನಾಂಕಮಾರ್ಚ್‌ 2023
ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ದಿನಾಂಕಜನವರಿ 2023 (ತಾತ್ಕಾಲಿಕ)
ಅಧಿಕೃತ ವೆಬ್‌ಸೈಟ್‌ಲಿಂಕ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ಕ್ಯಾಲೆಂಡರ್‌

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಶೈಕ್ಷಣಿಕ ವರ್ಷ 2022-23ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದ ಅಧಿಸೂಚನೆಗಳನ್ನು ಶೀಘ್ರದಲ್ಲಿಯೇ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದ್ದು, ಅದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ವಿವರಗಳನ್ನು ನೀವಿಲ್ಲಿ ಪಡೆಯಬಹುದು.

ಕ್ರ.ಸಂ.ಎಸ್‌ಎಸ್‌ಎಲ್‌ಸಿ: ಅಧಿಸೂಚನೆ ವಿಷಯಅಧಿಸೂಚನೆ ಪ್ರಕಟಣೆ ದಿನಾಂಕ (ತಾತ್ಕಾಲಿಕ)ವಿಷಯ ವಿವರ
1.ಎಸ್‌ಎಸ್‌ಎಲ್‌ಸಿ: ಆನ್‌ಲೈನ್‌ ಅರ್ಜಿ ಸಲ್ಲಿಕೆ2ನೇ ವಾರ, ಡಿಸೆಂಬರ್‌ 2022ಆನ್‌ಲೈನ್‌ನಲ್ಲಿ ಅರ್ಜಿ ನೋಂದಣಿಗೆ ಅಂತಿಮ ದಿನ: ಕೊನೆಯ ವಾರ, ಡಿಸೆಂಬರ್‌ 2022
2.ಪೂರ್ವ ಸಿದ್ಧತಾ ಪರೀಕ್ಷೆ4ನೇ ವಾರ, ಡಿಸೆಂಬರ್‌ 2022ಪರೀಕ್ಷೆ ದಿನಾಂಕ: 2ನೇ ವಾರ, ಫೆಬ್ರವರಿ 2023
3.ಮುಖ್ಯ ಪರೀಕ್ಷೆ ವೇಳಾಪಟ್ಟಿ ಘೋಷಣೆ2ನೇ ವಾರ, ಜನವರಿ 2023ಪರೀಕ್ಷೆ ನಡೆಯುವ ದಿನಾಂಕ: ಮಾರ್ಚ್‌/ಏಪ್ರಿಲ್‌ 2023
4.ಕರಡು ಅಥವಾ ತಾತ್ಕಾಲಿಕ ಪ್ರವೇಶ ಪತ್ರ ಡೌನ್‌ಲೋಡ್‌ ಮತ್ತು ತಿದ್ದುಪಡಿ2ನೇ ವಾರ, ಫೆಬ್ರವರಿ 2023ಡೌನ್‌ಲೋಡ್‌ ಮಾಡಿಕೊಳ್ಳಲು ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 4ನೇ ವಾರ, ಫೆಬ್ರವರಿ 2023
5.ಅಂತಿಮ ಪ್ರವೇಶ ಪತ್ರಗಳ ವಿತರಣೆ2ನೇ ವಾರ, ಮಾರ್ಚ್‌ 2023ಮುಖ್ಯ ಪರೀಕ್ಷೆಯ ದಿನಾಂಕಕ್ಕಿಂತ ಒಂದು ವಾರ ಮುಂಚಿತವಾಗಿ ಪ್ರವೇಶ ಪತ್ರಗಳ ವಿತರಣೆ ಆರಂಭ
6.ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭಮಾರ್ಚ್‌, 2023ಪರೀಕ್ಷೆ ನಡೆಯುವ ದಿನಾಂಕ: ಮಾರ್ಚ್‌/ಏಪ್ರಿಲ್‌ 2023
7.ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ2ನೇ ವಾರ, ಮೇ 20232ನೇ ವಾರ, ಮೇ 2023
8.ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ/ಮರು ಎಣಿಕೆ ಮತ್ತು ಸ್ಕ್ಯಾನ್‌ ಮಾಡಿದ ಪ್ರತಿ ಪಡೆಯಲು ಅರ್ಜಿ ಸಲ್ಲಿಕೆಮೇ/ಜೂನ್‌ 2023ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: ಜೂನ್‌ 2023
9.ಪೂರಕ ಪರೀಕ್ಷೆ ವೇಳಾಪಟ್ಟಿ ಘೋಷಣೆ2ನೇ ವಾರ, ಮೇ 2023ಪೂರಕ ಪರೀಕ್ಷೆ ದಿನಾಂಕ: ಜೂನ್‌/ಜುಲೈ 2023
10.ಪೂರಕ ಪರೀಕ್ಷೆ ಫಲಿತಾಂಶ4ನೇ ವಾರ, ಜುಲೈ 20234ನೇ ವಾರ, ಜುಲೈ 2023

ಎಸ್‌ಎಸ್‌ಎಲ್‌ಸಿ 2022-23: ಅರ್ಜಿ ಸಲ್ಲಿಕೆ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2022-23ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಧಿಸೂಚನೆಯನ್ನು 2022ರ ನವೆಂಬರ್‌/ಡಿಸೆಂಬರ್‌ ತಿಂಗಳಿನಲ್ಲಿ ಹೊರಡಿಸಲಿದೆ. 2023ರ ಮಾರ್ಚ್‌-ಏಪ್ರಿಲ್‌ ತಿಂಗಳಿನಲ್ಲಿ ನಡೆಯಲಿರುವ ಈ ಪರೀಕ್ಷೆಗೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನ ರಹಿತ ಶಾಲೆಗಳಿಂದ ಹಾಜರಾಗುವ ಅರ್ಹ ವಿದ್ಯಾರ್ಥಿಗಳು ನೋಂದಣಿಗಾಗಿ ಅರ್ಜಿ ಸಲ್ಲಿಸಬಹುದು. ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಮಂಡಳಿಯ ವೆಬ್‌ಸೈಟ್‌ ಲಿಂಕ್‌ ನಲ್ಲಿರುವ ಶಾಲಾ ಲಾಗಿನ್‌ ಮೂಲಕ ತಮ್ಮ ಶಾಲೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳ (CCERF), ಖಾಸಗಿ ಅಭ್ಯರ್ಥಿಗಳ (CCEPF) ಮತ್ತು ಪುನರಾವರ್ತಿತ ಅಭ್ಯರ್ಥಿಗಳ (CCERR, CCEPR, NSR ಮತ್ತು NSPR) ವಿವರಗಳನ್ನು ಅಪ್‌ಲೋಡ್‌ ಮಾಡಬಹುದು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳು

ಹತ್ತು ವರ್ಷಗಳ ಔಪಚಾರಿಕ ಶಿಕ್ಷಣ ಮುಗಿಸಿದ ಎಲ್ಲಾ ಶಾಲಾ ವಿದ್ಯಾರ್ಥಿಗಳು, ಹತ್ತನೇ ವರ್ಷದ ಅಂತ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಅವರನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

ಶಾಲಾ ಅಭ್ಯರ್ಥಿಗಳು:

  • ಕರ್ನಾಟಕ ರಾಜ್ಯದ ಅಧಿಕೃತ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ ಶಾಲಾ ವಿದ್ಯಾರ್ಥಿಗಳು
  • 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು.

ಪುನರಾವರ್ತಿತ ಅಭ್ಯರ್ಥಿಗಳು

  • ಶಾಲೆ/ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ CCE ಪದ್ಧತಿಯಲ್ಲಿ ಪರೀಕ್ಷೆಗೆ ಕುಳಿತು ಅನುತ್ತೀರ್ಣರಾಗಿದ್ದು, ಪುನಃ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಇಚ್ಛಿಸುವ CCERR ಅಭ್ಯರ್ಥಿಗಳು
  • ಶಾಲೆಗಳಲ್ಲಿ ವ್ಯಾಸಂಗ ಮಾಡಿ ಏಪ್ರಿಲ್‌ 2011ಕ್ಕಿಂತ ಮೊದಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕುಳಿತು ಅನುತ್ತೀರ್ಣರಾಗಿದ್ದು, ಪುನಃ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು

ಖಾಸಗಿ ಅಭ್ಯರ್ಥಿಗಳು

  • ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ಆಯಾ ವರ್ಷದ ಮಾರ್ಚ್‌ 1ನೇ ತಾರೀಖಿಗೆ ಕನಿಷ್ಠ 15 ವರ್ಷ ವಯಸ್ಸಿನವರಾಗಿರಬೇಕು.
  • ಮಾನ್ಯತೆ ಪಡೆದ ಮತ್ತು ಶಾಲಾ ಸಂಕೇತ ಪಡೆದ ಶಾಲೆಗಳಲ್ಲಿ ವ್ಯಾಸಂಗ ಮಾಡದಿರುವ/ಅರ್ಧದಲ್ಲಿಯೇ ವ್ಯಾಸಂಗ ಮೊಟಕುಗೊಳಿಸಿರುವ ಅಭ್ಯರ್ಥಿಗಳು ಮಾರ್ಚ್‌ 2023ಕ್ಕೆ ಕನಿಷ್ಠ 15 ವರ್ಷ ವಯಸ್ಸಿನವರಾಗಿರಬೇಕು.
  • ವಯೋಮಾನಕ್ಕೆ ಸಂಬಂಧಿಸಿದಂತೆ ಜನ್ಮ ದಿನಾಂಕ ಪ್ರಮಾಣ ಪತ್ರದ ದಾಖಲೆಯನ್ನು ಹೊಂದಿರಬೇಕು
  • CCE ಪದ್ಧತಿ ಪರೀಕ್ಷೆಯಲ್ಲಿ ಕುಳಿತು ಅನುತ್ತೀರ್ಣರಾಗಿರುವ ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಶಾಲೆಯಲ್ಲಿ ನೀಡಲಾಗುವ ಅರ್ಜಿಯನ್ನು ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಿ ತಮ್ಮ ಜನ್ಮ ದಿನಾಂಕ ದೃಢೀಕರಣ ಪತ್ರ, ದೃಢೀಕೃತ ಸಹಿ ಮತ್ತು ಮೂರು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರಗಳೊಂದಿಗೆ ಸಂಬಂಧಿತ ಶಾಲಾ ಕಚೇರಿಯಲ್ಲಿ ಸಲ್ಲಿಸಬೇಕು. 

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023 – ಅರ್ಜಿ ಸಲ್ಲಿಕೆ ವಿಧಾನ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಅರ್ಜಿ ನಮೂನೆ 2023 ಅನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಶಾಲಾ ಮುಖ್ಯಸ್ಥರು ಶಾಲಾ ಲಾಗಿನ್‌ ಮೂಲಕ ವಿದ್ಯಾರ್ಥಿಗಳ ಅರ್ಜಿಗಳನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬಹುದು. ಅರ್ಜಿ ಸಲ್ಲಿಕೆಗಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

  • ಮಾಹಿತಿಗಳನ್ನು ಅಪ್‌ಲೋಡ್ ಮಾಡಲು ಬಳಸಬೇಕಾದ ಅರ್ಜಿಯನ್ನು ಜಾಲತಾಣದಲ್ಲಿ ಪಡೆಯಬಹುದು.
  • ಮುಖ್ಯ ಶಿಕ್ಷಕರಿಗೆ ಮಂಡಳಿಯ ವತಿಯಿಂದ ಈಗಾಗಲೇ ನೀಡಿರುವ ಶಾಲಾ ಲಾಗಿನ್‌ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಬಳಸಿ ಆನ್‌ಲೈನ್‌ ನೋಂದಣಿ ಕಾರ್ಯ ಮಾಡಬಹುದಾಗಿದೆ.
  • ಆನ್‌ಲೈನ್ ಡೇಟಾ ಎಂಟ್ರಿ ಪ್ರಾರಂಭಿಸುವ ಮೊದಲು ಶಾಲೆಯ ಪ್ರತಿ ವಿದ್ಯಾರ್ಥಿಯ ಭಾವಚಿತ್ರ (60-80 kB) ಹಾಗೂ ಸಹಿಯನ್ನು (40-50 kB) ನಿಗದಿತ ಅಳತೆಯಲ್ಲಿ jpeg ಫಾರ್ಮ್ಯಾಟ್‌ನಲ್ಲಿ ಸ್ಕ್ಯಾನ್ ಮಾಡಿ ಅವರ ಎಸ್‌.ಎ.ಟಿ.ಎಸ್. (SATS) ನೋಂದಣಿ ಸಂಖ್ಯೆಯೊಂದಿಗೆ ಸೇವ್‌ ಮಾಡಿಟ್ಟುಕೊಳ್ಳಬೇಕು.
  • ಎಸ್ಎಸ್ಎಲ್‌ಸಿ ಪರೀಕ್ಷೆಯ ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಆನ್‌ಲೈನ್‌ನಲ್ಲಿ ಸೃಜಿಸಲಾಗುವ ಪರೀಕ್ಷಾ ಶುಲ್ಕದ ಚಲನ್‌ ಅನ್ನು ಬ್ಯಾಂಕ್‌ನಲ್ಲಿ ಪಾವತಿಸಿ ಚಲನ್‌ ಅನ್ನು ಮಂಡಳಿಗೆ ಸಲ್ಲಿಸಬೇಕು.
  • ಪ್ರಸ್ತುತ ಆನ್‌ಲೈನ್ ಮೂಲಕ ಭರ್ತಿ ಮಾಡಲಾಗುವ ವಿದ್ಯಾರ್ಥಿಗಳ ವಿವರಗಳು ಅಂಕಪಟ್ಟಿ ಹಾಗೂ ವರ್ಗಾವಣೆ ಪತ್ರಗಳಲ್ಲಿ ನಮೂದಾಗುವುದರಿಂದ ಯಾವುದೇ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅರ್ಜಿ ನಮೂನೆ 2023: ಶುಲ್ಕ ವಿವರ

ಕ್ರ.ಸಂ ವಿದ್ಯಾರ್ಥಿಗಳ ವಿವರ ಶುಲ್ಕ
ಪ್ರಥಮ ಬಾರಿಗೆ ಹಾಜರಾಗುವ ಶಾಲಾ ವಿದ್ಯಾರ್ಥಿಗಳು / ಖಾಸಗಿ ಅಭ್ಯರ್ಥಿಗಳಿಗೆ ಶುಲ್ಕ
1. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ 585/-
2. ಲ್ಯಾಮಿನೇಷನ್‌ ಶುಲ್ಕ 22/-
ಪುನರಾವರ್ತಿತ ಶಾಲಾ/ಖಾಸಗಿ ಅಭ್ಯರ್ಥಿಗಳ ಶುಲ್ಕ
3. ಒಂದು ವಿಷಯಕ್ಕೆ 370/-
4. ಎರಡು ವಿಷಯಗಳಿಗೆ 461/-
5. ಮೂರು ವಿಷಯಗಳು ಹಾಗೂ ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ 620/-

ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಅಧಿಸೂಚನೆ 2022-23

10ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಗೆ ಸಂಬಂಧಿಸಿದ ದಿಕ್ಸೂಚಿಯಾಗಿದೆ. ಅದರಂತೆ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2022ರ ಡಿಸೆಂಬರ್‌ ಅಥವಾ ಜನವರಿ 2023ರಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಯ ಅಧಿಸೂಚನೆ ಹೊರಡಿಸಲಿದ್ದು, 2023ರ ಫೆಬ್ರವರಿ ಮೊದಲನೇ ವಾರದಲ್ಲಿ (ತಾತ್ಕಾಲಿಕ ದಿನಾಂಕ) ರಾಜ್ಯಾದ್ಯಂತ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. 

ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಮಾದರಿಯಲ್ಲಿಯೇ ಈ ಪರೀಕ್ಷೆಗೂ ಸಿದ್ಧಪಡಿಸಿ, ವೇಳಾಪಟ್ಟಿಯನ್ನು ಪ್ರಕಟಿಸಿ, ಪರೀಕ್ಷೆ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು  ಶಾಲಾ ಹಂತದಲ್ಲಿಯೇ ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ನಡೆಯುವ ಒಂದು ತಿಂಗಳ ಮುಂಚಿತವಾಗಿ ನಡೆಸಲಾಗುತ್ತದೆ. 

ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ 2023: ವೇಳಾಪಟ್ಟಿ ಬಿಡುಗಡೆ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2023ರ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ವೇಳಾಪಟ್ಟಿಯನ್ನು ಜನವರಿ 2023ರಲ್ಲಿ ಪ್ರಕಟಿಸುವ ನಿರೀಕ್ಷೆ ಇದ್ದು, ಪರೀಕ್ಷೆಯು ಮಾರ್ಚ್‌/ಏಪ್ರಿಲ್‌ 2023ರಲ್ಲಿ ನಡೆಯಲಿದೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾದರಿ ವಿವರಗಳು 2023

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಹೊರಡಿಸುವ ಅಧಿಸೂಚನೆಯು ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಬಗ್ಗೆ ಸಂಪೂರ್ಣ ವಿವರವನ್ನು ಒಳಗೊಂಡಿರುತ್ತದೆ. ಅದರಂತೆ ಕೆಲವು ಮುಖ್ಯ ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ. 

  • ಹತ್ತು ವರ್ಷದ ಔಪಚಾರಿಕ ಶಿಕ್ಷಣ ಮುಗಿಸಿದ ಎಲ್ಲಾ ಶಾಲಾ ವಿದ್ಯಾರ್ಥಿಗಳು ಹತ್ತನೇ ವರ್ಷದ ಅಂತ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯನ್ನು ಬರೆಯಬಹುದು.
  • ಪರೀಕ್ಷೆಯು ವಿದ್ಯಾರ್ಥಿಯ ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷಾ ವಿಧಾನದಿಂದ ಕೂಡಿರುತ್ತದೆ.
  • ಬಾಹ್ಯ ಪರೀಕ್ಷೆಗೆ (ಲಿಖಿತ ಪರೀಕ್ಷೆ) ಶೇ.80 ಹಾಗೂ ಆಂತರಿಕ ಮೌಲ್ಯಮಾಪನಕ್ಕೆ ಶೇ.20 ಅಂಕಗಳನ್ನು ನಿಗದಿಪಡಿಸಲಾಗಿದೆ.
  • ವಿದ್ಯಾರ್ಥಿಗಳ ಪ್ರಗತಿಯನ್ನು ಭಾಗ-ಎ (ಪಠ್ಯ ವಿಷಯಗಳು), ಭಾಗ-ಬಿ (ಸಹಪಠ್ಯ ವಿಷಯಗಳು) ಆಧಾರದ ಮೇಲೆ ಪರಿಗಣಿಸಲಾಗುತ್ತದೆ.
  • ಭಾಗ-ಎ ಯಲ್ಲಿ ಬರುವ ಪ್ರತಿ ವಿಷಯಗಳ ಅಂಕಗಳು ಹಾಗೂ ಶ್ರೇಣಿಗಳನ್ನು ಆಧರಿಸಿ ಒಟ್ಟಾರೆ ಅಂಕಗಳು ಮತ್ತು CGA ಶ್ರೇಣಿಯನ್ನು (Cumulative Grade Average) ನೀಡಲಾಗುತ್ತದೆ.
  • ಎಲ್ಲಾ ವಿಷಯಗಳಲ್ಲಿ ಬಾಹ್ಯ ಪರೀಕ್ಷೆಗೆ ಒಟ್ಟು 500 ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನಕ್ಕೆ 125 ಅಂಕಗಳನ್ನು ನಿಗದಿಪಡಿಸಿದೆ. 

ವಿಷಯವಾರು ಅಂಕಗಳ ವಿಂಗಡಣೆ 

  • ಆಂತರಿಕ ಮೌಲ್ಯಮಾಪನವು ಪ್ರಾಯೋಗಿಕ ಅಥವಾ ಪ್ರಾಜೆಕ್ಟ್ ಆಧಾರಿತವಾಗಿರಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಲಿಖಿತ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಯಶಸ್ಸಿನ ಆಧಾರದ ಮೇಲೆ 80 ಅಂಕಗಳನ್ನು ನೀಡಲಾಗುತ್ತದೆ.
  • ಭಾಗ-ಬಿ ಸಹಪಠ್ಯ ವಿಷಯಗಳಾದ (P1) ದೈಹಿಕ ಮತ್ತು ಆರೋಗ್ಯ ಶಿಕ್ಷಣ, (P2) ಮನೋಭಾವ ಮತ್ತು ಮೌಲ್ಯಗಳು, (P3) ಕಾರ್ಯಾನುಭವ,  (P4) ಕಲಾ ಶಿಕ್ಷಣವನ್ನು ಒಳಗೊಂಡಿದ್ದು, ಈ ವಿಷಯಗಳಿಗೆ ಎ, ಬಿ, ಸಿ ಶ್ರೇಣಿಗಳನ್ನು ನೀಡಲಾಗುತ್ತದೆ.
  • ಪರೀಕ್ಷೆಯ ದಿನದಂದು ಪರೀಕ್ಷೆ ಆರಂಭವಾದ ಮೊದಲ 15 ನಿಮಿಷಗಳನ್ನು ವಿದ್ಯಾರ್ಥಿಗಳು ಪ್ರಶ್ನೆಪತ್ರಿಯನ್ನು ಓದಲು ನಿಗದಿಪಡಿಸಲಾಗಿದ್ದು, ಪ್ರಶ್ನೆಪತ್ರಿಕೆಗೆ ಉತ್ತರಿಸಲು 3 ಗಂಟೆಗಳ ಕಾಲಾವಧಿಯನ್ನು ನಿಗದಿಪಡಿಸಲಾಗುತ್ತದೆ. 

ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ 2022ರ ವೇಳಾಪಟ್ಟಿಯನ್ನು ಗಮನಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023: ಕರಡು ಅಥವಾ ತಾತ್ಕಾಲಿಕ ಪ್ರವೇಶ ಪತ್ರಗಳ ಡೌನ್‌ಲೋಡ್‌ ಮತ್ತು ತಿದ್ದುಪಗೆ ಅರ್ಜಿ ಸಲ್ಲಿಸಲು ಅಧಿಸೂಚನೆ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಲ್ಲಾ ಶಾಲೆಗಳ ಮುಖ್ಯಸ್ಥರು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾರ್ಥಿಗಳ ನೋಂದಣಿ ಮಾಡಿದ ಬಳಿಕ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಕರಡು ಅಥವಾ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ ಲಿಂಕ್‌ನಲ್ಲಿ ಅಪ್‌ಲೋಡ್‌ ಮಾಡಿ, 2023ರ ಫೆಬ್ರವರಿ ಎರಡನೇ ವಾರದಲ್ಲಿ ಅಧಿಸೂಚನೆಯನ್ನು ಹೊರಡಿಸುತ್ತದೆ. ಬಳಿಕ ಎಲ್ಲಾ ಶಾಲೆಗಳ ಮುಖ್ಯಸ್ಥರು, ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ತಂತ್ರಾಂಶವನ್ನು ಬಳಸಿ, ಶಾಲೆಯ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳ ತಿದ್ದುಪಡಿಗಳನ್ನು ಅಪ್‌ಡೇಟ್‌ ಮಾಡಬೇಕಿರುತ್ತದೆ. 

ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲಿಸಿ ಅಂತಿಮಗೊಳಿಸಲು ಇದು ಕಡೆಯ ಅವಕಾಶವಾಗಿದ್ದು, ಇದೇ ವಿವರಗಳು ವಿದ್ಯಾರ್ಥಿಯ ಅಂತಿಮ ಪ್ರವೇಶ ಪತ್ರ ಮತ್ತು ಅಂಕಪಟ್ಟಿಯಲ್ಲಿ ನಮೂದಾಗುತ್ತವೆ. ಶಾಲೆಗಳ ಮುಖ್ಯ ಶಿಕ್ಷಕರು ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಂಡು, ವಿದ್ಯಾರ್ಥಿಯ ಭಾವಚಿತ್ರ, ಸಹಿ, ಪರೀಕ್ಷಾ ಕೇಂದ್ರ, ವಿಷಯಗಳು, ಜನ್ಮ ದಿನಾಂಕ ಸೇರಿದಂತೆ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ, ತಿದ್ದುಪಡಿ ಏನಾದರೂ ಅಗತ್ಯವಿದ್ದಲ್ಲಿ ಒಂದು ವಾರದೊಳಗೆ ಅಪ್‌ಡೇಟ್‌ ಮಾಡಲು ಕಾಲಾವಕಾಶ ನೀಡಲಾಗುತ್ತದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023: ಅಂತಿಮ ಪ್ರವೇಶ ಪತ್ರಗಳ ವಿತರಣೆಗೆ ಅಧಿಸೂಚನೆ

2023ರ ಮಾರ್ಚ್‌/ಏಪ್ರಿಲ್‌ ತಿಂಗಳಿನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು 2023ರ ಮಾರ್ಚ್‌ ಎರಡನೇ ವಾರದಲ್ಲಿ ಅಥವಾ ಮುಖ್ಯ ಪರೀಕ್ಷೆಗೆ ನಿಗದಿಯಾದ ದಿನಾಂಕಕ್ಕೆ ಒಂದು ವಾರ ಮುಂಚಿತವಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಈ ಅಂತಿಮ ಪ್ರವೇಶ ಪತ್ರಗಳನ್ನು ಶಾಲಾ ಮುಖ್ಯೋಪಾಧ್ಯಾಯರು ಮಂಡಳಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಶಾಲಾ ಲಾಗಿನ್‌ ಮೂಲಕ ಡೌನ್‌ಲೋಡ್‌ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿತರಿಸಬೇಕಾಗುತ್ತದೆ.  

ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ 2023 ಮತ್ತು ಫಲಿತಾಂಶ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯು ಸಾಮಾನ್ಯವಾಗಿ ಮಾರ್ಚ್‌ ಕೊನೆಯ ವಾರದಲ್ಲಿ ಆರಂಭವಾಗಿ ಏಪ್ರಿಲ್‌ ಎರಡನೇ ವಾರದಲ್ಲಿ ಕೊನೆಗೊಳ್ಳುತ್ತದೆ. ಪರೀಕ್ಷೆ ಮುಕ್ತಾಯವಾದ ಒಂದು ತಿಂಗಳ ಅವಧಿಯಲ್ಲಿ, ಅಂದರೆ ಮೇ 2ನೇ ವಾರದಲ್ಲಿ ಮಂಡಳಿಯು ಪರೀಕ್ಷೆಯ ಫಲಿತಾಂಶ ಪಟ್ಟಿಯನ್ನು ಪ್ರಕಟಿಸುತ್ತದೆ. ಆಯಾ ಶಾಲಾ ಮುಖ್ಯ ಶಿಕ್ಷಕರು ಮಂಡಳಿಯ ವೆಬ್‌ಸೈಟ್‌ ಲಿಂಕ್‌ನಲ್ಲಿ  ಶಾಲಾ ಲಾಗಿನ್‌ ಮೂಲಕ ವಿದ್ಯಾರ್ಥಿಗಳ ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಮತ್ತೊಂದೆಡೆ, ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಪಡೆಯಲು ಅವಕಾಶವಿರುತ್ತದೆ.

ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ/ಮರು ಎಣಿಕೆ ಮತ್ತು ಸ್ಕ್ಯಾನ್‌ ಮಾಡಿದ ಪ್ರತಿ ಪಡೆಯಲು ಅರ್ಜಿ ಸಲ್ಲಿಕೆ ಕುರಿತು ಅಧಿಸೂಚನೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ರ ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ, ಮರುಎಣಿಕೆ ಹಾಗೂ ಮರುಮೌಲ್ಯಮಾಪನಕ್ಕಾಗಿ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕದ ವಿವರಗಳಿಗೆ ಸಂಬಂಧಿಸಿದ ಸುತ್ತೋಲೆಯನ್ನು ಮಂಡಳಿಯು ಮೇ 2023ರಲ್ಲಿ ಹೊರಡಿಸಲಿದೆ. 

2022ರಲ್ಲಿ ಮರುಮೌಲ್ಯಮಾಪನ, ಮರುಎಣಿಕೆ ಮತ್ತು ಸ್ಕ್ಯಾನ್‌ ಪ್ರತಿ ಪಡೆಯಲು ನಿಗದಿಯಾಗಿದ್ದ ಅಂತಿಮ ದಿನಾಂಕಗಳು ಮತ್ತು ಶುಲ್ಕದ ವಿವರಗಳನ್ನು ತಿಳಿಯಲು ಈ ಲಿಂಕ್‌ ಕ್ಲಿಕ್‌ ಮಾಡಿ.

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ 2023 ಮತ್ತು ಫಲಿತಾಂಶ ಘೋಷಣೆ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ 2023ರ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯನ್ನು ಬರೆದು ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಹಾಗೂ ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಅನುತ್ತೀರ್ಣರಾದ ಎಲ್ಲಾ ಅರ್ಹ ಪುನರಾವರ್ತಿತ ಅಭ್ಯರ್ಥಿಗಳಿಗೆ ಜೂನ್‌ 2023ರಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟವಾದ ಕೂಡಲೇ ಈ ಪೂರಕ ಪರೀಕ್ಷೆಗೆ ನೋಂದಣಿ, ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಮಂಡಳಿಯು ಅಧಿಸೂಚನೆಯನ್ನು ಹೊರಡಿಸಲಿದೆ. ಪೂರಕ ಪರೀಕ್ಷೆಯ ಫಲಿತಾಂಶವನ್ನು 2023ರ ಜುಲೈನಲ್ಲಿ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಫಲಿತಾಂಶವನ್ನು ಪಡೆಯಬಹುದಾಗಿದೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ರ ಅಧಿಸೂಚನೆಗೆ ಸಂಬಂಧಿಸಿದಂತೆ ಪದೇಪದೇ ಕೇಳಲಾಗುವ ಪ್ರಶ್ನೆಗಳು FAQs

ಪ್ರ. 1: ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ಕ್ಕೆ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆ ಯಾವಾಗ ಆರಂಭವಾಗುತ್ತದೆ?

ಉತ್ತರ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2023ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 2022ರ ನವೆಂಬರ್‌/ಡಿಸೆಂಬರ್‌ ತಿಂಗಳಿನಲ್ಲಿ ಅಧಿಸೂಚನೆ ಹೊರಡಿಸಲಿದೆ. ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನ ರಹಿತ ಶಾಲೆಗಳಿಂದ ಹಾಜರಾಗುವ ಅರ್ಹ ವಿದ್ಯಾರ್ಥಿಗಳು ನೋಂದಣಿಗಾಗಿ ಅರ್ಜಿ ಸಲ್ಲಿಸಬಹುದು. ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಮಂಡಳಿಯ ವೆಬ್‌ಸೈಟ್‌ನಲ್ಲಿರುವ ಶಾಲಾ ಲಾಗಿನ್‌ ಮೂಲಕ ತಮ್ಮ ಶಾಲೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳ (CCERF), ಖಾಸಗಿ ಅಭ್ಯರ್ಥಿಗಳ (CCEPF) ಮತ್ತು ಪುನರಾವರ್ತಿತ ಅಭ್ಯರ್ಥಿಗಳ (CCERR, CCEPR, NSR ಮತ್ತು NSPR) ವಿವರಗಳನ್ನು ಅಪ್‌ಲೋಡ್‌ ಮಾಡಬಹುದು.

ಪ್ರ. 2. 2023ರ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಯಾವಾಗ ಪ್ರಾರಂಭವಾಗಲಿದೆ?

ಉತ್ತರ: ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯು 2023ರ ಮಾರ್ಚ್‌/ಏಪ್ರಿಲ್‌ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದ್ದು, ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲಿ ಜನವರಿ 2023ರಲ್ಲಿ ಪ್ರಕಟಿಸಲಾಗುತ್ತದೆ.

ಪ್ರ. 3. ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ 2023ರ ಫಲಿತಾಂಶವನ್ನು ಎಲ್ಲಿ ತಿಳಿಯಬಹುದು?

ಉತ್ತರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2023 ಅನ್ನು ಮಂಡಳಿಯು ಮೇ ತಿಂಗಳಿನಲ್ಲಿ ಪ್ರಕಟಿಸಲಿದ್ದು, ಶಾಲಾ ಮುಖ್ಯಸ್ಥರು sslc.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಶಾಲಾ ಲಾಗಿನ್‌ ಮೂಲಕ ವಿದ್ಯಾರ್ಥಿಗಳ ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಫಲಿತಾಂಶವನ್ನು  ವೆಬ್‌ಸೈಟ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಪಡೆಯಬಹುದು.

ಪ್ರ. 4. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯನ್ನು ಯಾವ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದು?

ಉತ್ತರ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ 2023ರ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯನ್ನು ಬರೆದು ಅನುತ್ತೀರ್ಣರಾದ ಅಭ್ಯರ್ಥಿಗಳು ಹಾಗೂ ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಅನುತ್ತೀರ್ಣರಾದ ಎಲ್ಲಾ ಅರ್ಹ ಪುನರಾವರ್ತಿತ ಅಭ್ಯರ್ಥಿಗಳು ಪೂರಕ ಪರೀಕ್ಷೆ ತೆಗೆದುಕೊಳ್ಳಬಹುದು.

ಪ್ರ. 5. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ 2023 ಅನ್ನು ಯಾವಾಗ ನಡೆಸಲಾಗುತ್ತದೆ?

ಉತ್ತರ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2023ರ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯನ್ನು ಜೂನ್‌/ಜುಲೈ ತಿಂಗಳಿನಲ್ಲಿ ನಡೆಸಲಿದ್ದು, ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಎಸ್‌ಎಸ್‌ಎಲ್‌ಸಿ ಫಲಿತಾಂಶ ಘೋಷಣೆಯಾದ ಕೂಡಲೇ ಹೊರಡಿಸಲಿದೆ. 

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.  ʻಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023: ಅಧಿಸೂಚನೆಗಳುʼ ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ನೀಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ