• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 26-08-2022

ಎಸ್ಎಸ್ಎಲ್‌ಸಿ ಬಳಿಕ ಮಾಡಬಹುದಾದ ಟಾಪ್ 5 ಕೋರ್ಸ್‌ಗಳು

img-icon

ಎಸ್‌ಎಸ್‌ಎಲ್‌ಸಿ ನಂತರದ ಹಾದಿಗೆ ಸಮರ್ಪಕ ಮಾರ್ಗದರ್ಶನ: ಕರ್ನಾಟಕದ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಇದು ವಿದ್ಯಾರ್ಥಿಗಳ ಕಲಿಕೆಯ ಸ್ವಾಭಾವಿಕ ಮೌಲ್ಯಮಾಪನ ಪ್ರಕ್ರಿಯೆಯಾದರೂ, ಇದು ವಿದ್ಯಾರ್ಥಿ ಸಾಧನೆಯ ಸಂತೃಪ್ತ ಭಾವದ ಪ್ರಮುಖ ಹಂತ ಎನ್ನಬಹುದು. ತನ್ನ ಸಾಧನೆಯ ಸ್ವಯಂ ಆನಂದ, ವಿದ್ಯಾರ್ಥಿ ಜೀವನದ ಆಂತರ್ಯದ ಸ್ಫೂರ್ತಿಯೂ ಹೌದು. ಆದ್ದರಿಂದ ವಿದ್ಯಾರ್ಥಿಗಳಿಗೆ ಅದೊಂದು ಪರ್ವಕಾಲ. ಸಾಮೂಹಿಕ ಮತ್ತು ಸಾರ್ವತ್ರಿಕವಾಗಿ ನಡೆಯುವ ಈ ಪರೀಕ್ಷಾ ಪ್ರಕ್ರಿಯೆ ಕಲಿಕಾ ಸಾಧನೆಯನ್ನು ಗುರುತಿಸುವ, ಪ್ರೋತ್ಸಾಹಿಸುವ ಹಾಗೂ ಪ್ರಶಂಸಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅದು ಸರ್ದಾ ಸ್ಫೂರ್ತಿಯನ್ನು ನೀಡುವುದಲ್ಲದೆ, ಮುಂದಿನ ವ್ಯಾಸಂಗದಲ್ಲಿ ಆಸಕ್ತಿದಾಯಕ ಕ್ಷೇತ್ರವನ್ನು ನಿರ್ಧರಿಸಲು ಹಾಗೂ ಆಯ್ಕೆಮಾಡಿಕೊಳ್ಳಲು ಪ್ರೇರಣೆಯೂ ಆಗುತ್ತದೆ. ಈ ದಿಶೆಯಲ್ಲಿ ಎಸ್‌ಎಸ್ಎಲ್‌ಸಿ ಪಬ್ಲಿಕ್ ಪರೀಕ್ಷೆಯು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಒಂದು ಮಹತ್ವದ ಮೈಲುಗಲ್ಲು.

ಈ ಮಹತ್ವಪೂರ್ಣ ಎಸ್‌ಎಸ್ಎಲ್‌ಸಿ ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳ ಮುಂದೆ ಹಲವಾರು ಆಯ್ಕೆಗಳಿವೆ. ಪಿಯುಸಿ, ಡಿಪ್ಲೊಮಾ, ಐಟಿಐನಂತಹ ಆಯ್ಕೆಗಳು ಅವರ ಮುಂದಿವೆ. ಪೋಷಕರ ಒತ್ತಡಕ್ಕೆ ಮಣಿದೋ ಅಥವಾ ಗೆಳೆಯರು ಆ ಕೋರ್ಸ್ ಮಾಡುತ್ತಿದ್ದಾರೆ ಎಂದು ಕುರುಡಾಗಿ ಯಾವುದೋ ಒಂದನ್ನು ಆಯ್ಕೆ ಮಾಡಿಕೊಳ್ಳದೆ, ತಮಗೆ ಆಸಕ್ತಿ ಇರುವ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡರೆ ಅವರ ಮುಂದಿನ ವೃತ್ತಿ ಬದುಕು ಉಜ್ವಲವಾಗಿರುತ್ತದೆ. ಎಸ್‌ಎಸ್ಎಲ್‌ಸಿ ಬಳಿಕ ಯಾವೆಲ್ಲಾ ಕೋರ್ಸ್‌ಗಳನ್ನು ಮಾಡಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಆಸಕ್ತಿಯ ಕೋರ್ಸ್‌ನನ್ನು ನೀವೇ ಆಯ್ಕೆ ಮಾಡಿಕೊಳ್ಳಿ, ಸಾಧ್ಯವಾದರೆ ವೃತ್ತಿ ಸಮಾಲೋಚನೆ ಮತ್ತು ಮಾರ್ಗದರ್ಶನದ (Career counseling and guidance) ತಜ್ಞರ ಸಲಹೆಯನ್ನೂ ಪಡೆಯಿರಿ. ಈಗ ಎಸ್‌ಎಸ್ಎಲ್‌ಸಿ ಬಳಿಕ ಯಾವೆಲ್ಲಾ ಕೋರ್ಸ್‌ಗಳನ್ನು ಮಾಡಬಹುದು ಎಂಬುದನ್ನು ನೋಡೋಣ. 

ವಿಜ್ಞಾನ-ಪಿಯುಸಿ:

ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿಕೊಂಡರೆ ಮುಂದೆ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಸಂಶೋಧನಾ ಕ್ಷೇತ್ರಗಳಂತಹ ಅನೇಕ ವೃತ್ತಿ ಆಯ್ಕೆಯ ಅವಕಾಶಗಳು ಲಭಿಸುತ್ತವೆ. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಇದು ಅತ್ಯಂತ ನೆಚ್ಚಿನ ವೃತ್ತಿ ಆಯ್ಕೆಯಾಗಿದೆ.

ವಿಜ್ಞಾನದ ಪ್ರಮುಖ ಪ್ರಯೋಜನವೆಂದರೆ, ದ್ವಿತೀಯ ಪಿಯುಸಿ ಬಳಿಕ ನೀವು ವಿಜ್ಞಾನದಿಂದ ವಾಣಿಜ್ಯಕ್ಕೆ ಅಥವಾ ವಿಜ್ಞಾನದಿಂದ ಕಲಾ ವಿಭಾಗಕ್ಕೆ ಬದಲಾಯಿಸಬಹುದು. ದ್ವಿತೀಯ ಪಿಯುಸಿ ನಂತರ ವಿಜ್ಞಾನದ ವಿಭಾಗದ ವಿದ್ಯಾರ್ಥಿಗಳಿಗೆ ಹಲವಾರು ವೃತ್ತಿ ಆಯ್ಕೆಗಳು ಲಭ್ಯವಿದೆ.


ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಗಣಕ ವಿಜ್ಞಾನ (ಕಂಪ್ಯೂಟರ್ ಸೈನ್ಸ್), ಗೃಹವಿಜ್ಞಾನ, ಭೂಗರ್ಭಶಾಸ್ತ್ರ, ಎಲೆಕ್ಟ್ರಾನಿಕ್ಸ್ ಮುಖ್ಯ ವಿಷಯಗಳು.

ಆದರೆ ಗಣಿತವನ್ನು ಇಷ್ಟಪಡದ ಅಥವಾ ಅದರಲ್ಲಿ ಆಸಕ್ತಿಯಿಲ್ಲದ ಅನೇಕ ವಿದ್ಯಾರ್ಥಿಗಳಿದ್ದಾರೆ, ಆದರೆ ನೀವು ವೈದ್ಯಕೀಯ ವೃತ್ತಿಯನ್ನು ಮುಂದುವರಿಸಲು ಬಯಸಿದರೆ ನೀವು ಗಣಿತವನ್ನು ಬಿಟ್ಟು ಬೇರೆ ವಿಷಯಗಳನ್ನು ಆಯ್ಕೆ ಮಾಡಬಹುದು.

ವಿಜ್ಞಾನ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗಳು

1. ಬ್ಯಾಚುಲರ್ ಆಫ್ ಮೆಡಿಸಿನ್ ಆಂಡ್ ಬ್ಯಾಚುಲರ್ ಆಫ್ ಸರ್ಜರಿ (ಎಂಬಿಬಿಎಸ್)

2. ಇಸ್ರೋ, ಡಿಆರ್‌ಡಿಒ, ಸಂಶೋಧನಾ ಕೇಂದ್ರಗಳಲ್ಲಿ ವಿಜ್ಞಾನಿ

3. ಪಶುವೈದ್ಯಕೀಯ ವಿಜ್ಞಾನ

4. ಕೆಮಿಕಲ್ ಇಂಜಿನಿಯರಿಂಗ್

5. ಏರೋನಾಟಿಕಲ್ ಇಂಜಿನಿಯರಿಂಗ್

6. ಅಪರಾಧಶಾಸ್ತ್ರ, ವಿಧಿ ವಿಜ್ಞಾನ 

7. ಔಷಧ ರಸಾಯನಶಾಸ್ತ್ರ

ವಾಣಿಜ್ಯ-ಪಿಯುಸಿ

ವಿಜ್ಞಾನದ ನಂತರ ವಾಣಿಜ್ಯವು ಎರಡನೇ ಅತ್ಯಂತ ಜನಪ್ರಿಯ ವೃತ್ತಿ ಆಯ್ಕೆಯಾಗಿದೆ. ವ್ಯಾಪಾರ/ವ್ಯವಹಾರಕ್ಕೆ ವಾಣಿಜ್ಯವು ಉತ್ತಮ ಆಯ್ಕೆಯಾಗಿದೆ. ನೀವು ಸಂಖ್ಯೆಗಳು, ಹಣಕಾಸು ಮತ್ತು ಅರ್ಥಶಾಸ್ತ್ರದ ವಿಷಯಗಳಲ್ಲಿ ಆಸಕ್ತಿ ಇದ್ದರೆ ವಾಣಿಜ್ಯ ವಿಭಾಗವು ನಿಮಗೆ ಅತ್ಯುತ್ತಮ ಆಯ್ಕೆಯಾಗುತ್ತದೆ.

ಇದು ಚಾರ್ಟರ್ಡ್ ಅಕೌಂಟೆಂಟ್, ಎಂಬಿಎ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹೂಡಿಕೆಯಂತಹ ವ್ಯಾಪಕವಾದ ವೃತ್ತಿ ಆಯ್ಕೆಗಳನ್ನು ನೀಡುತ್ತದೆ. ನೀವು ಅಕೌಂಟೆನ್ಸಿ, ಹಣಕಾಸು ಮತ್ತು ಅರ್ಥಶಾಸ್ತ್ರವನ್ನು ಚೆನ್ನಾಗಿ ತಿಳಿದಿರಬೇಕು.

ವಾಣಿಜ್ಯ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗಳು

1. ಚಾರ್ಟರ್ಡ್ ಅಕೌಂಟೆಂಟ್

2. ವ್ಯವಹಾರ ನಿರ್ವಹಣೆ

3. ಜಾಹೀರಾತು ಮತ್ತು ಮಾರಾಟ ನಿರ್ವಹಣೆ

4. ಡಿಜಿಟಲ್ ಮಾರ್ಕೆಟಿಂಗ್

5. ಮಾನವ ಸಂಪನ್ಮೂಲ ಅಭಿವೃದ್ಧಿ

ಕಲೆ/ಮಾನವಶಾಸ್ತ್ರಗಳು-ಪಿಯುಸಿ

ಶೈಕ್ಷಣಿಕ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಕಲೆ/ಮಾನವೀಯ ವಿಷಯಗಳು ಆಸಕ್ತಿಯ ಕ್ಷೇತ್ರ. ನೀವು ಸೃಜನಶೀಲರಾಗಿದ್ದರೆ ಮತ್ತು ಮಾನವ ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಲು ಬಯಸಿದರೆ, ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಕಲಾ ವಿದ್ಯಾರ್ಥಿಗಳಿಗೆ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ಮುಖ್ಯ ವಿಷಯಗಳು.

ಕಲಾ ವಿಭಾಗವು ಈಗ ವೃತ್ತಿಜೀವನಕ್ಕೆ ಪರ್ಯಾಯವಾದ ಒಂದು ಶ್ರೇಣಿಯನ್ನು ಒದಗಿಸುತ್ತವೆ, ಇದು ವಿಜ್ಞಾನ ಮತ್ತು ವಾಣಿಜ್ಯವು ನೀಡುವಂತೆಯೇ ಸಮಾನವಾದ ಅವಕಾಶಗಳನ್ನು ಹೊಂದಿದೆ.

ಕಲಾ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗಳು

1. ಉತ್ಪನ್ನ ವಿನ್ಯಾಸ

2. ಮಾಧ್ಯಮ / ಪತ್ರಿಕೋದ್ಯಮ

3. ಫ್ಯಾಷನ್ ತಂತ್ರಜ್ಞಾನ

4. ವೀಡಿಯೊ ನಿರ್ಮಾಣ ಮತ್ತು ಎಡಿಟಿಂಗ್

5. ಮಾನವ ಸಂಪನ್ಮೂಲ ತರಬೇತಿ, ಶಾಲಾ ಬೋಧನೆ, ಇತ್ಯಾದಿ

ITI (ಕೈಗಾರಿಕಾ ತರಬೇತಿ ಸಂಸ್ಥೆ)

ಶಾಲೆಯನ್ನು ಪೂರ್ಣಗೊಳಿಸಿದ ನಂತರ ಸುಲಭ ಉದ್ಯೋಗವನ್ನು ಬಯಸುವ ವಿದ್ಯಾರ್ಥಿಗಳಿಗೆ ಕೋರ್ಸ್‌ಗಳನ್ನು ಒದಗಿಸುವುದು ಈ ತರಬೇತಿ ಕೇಂದ್ರಗಳ ಉದ್ದೇಶ. ಯಾವುದೇ ತಾಂತ್ರಿಕ ಕೋರ್ಸ್ ಅನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲು ಬಯಸುವ ವಿದ್ಯಾರ್ಥಿಗಳಿಗೆ ಐಟಿಐ ಕೋರ್ಸ್‌ಗಳು ಉತ್ತಮ ಅವಕಾಶಗಳಾಗಿವೆ.

ITI ಯಲ್ಲಿ ಕೋರ್ಸ್ ಪೂರ್ಣಗೊಳಿಸುವ ಮೂಲಕ, ವಿದ್ಯಾರ್ಥಿಯು ಈಗ ಕೈಗಾರಿಕಾ ಕೌಶಲ್ಯಗಳಲ್ಲಿ ತರಬೇತಿ ಪಡೆಯುತ್ತಾರೆ ಮತ್ತು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ಜೀವನವನ್ನು ಗಳಿಸಬಹುದು.

ITI ನಂತರ ವೃತ್ತಿ ಆಯ್ಕೆಗಳು

1. ಲೋಕೋಪಯೋಗಿ (PWD) ಗಳು ಮತ್ತು ಇತರ ಸಾರ್ವಜನಿಕ ವಲಯಗಳಲ್ಲಿ ಉದ್ಯೋಗಾವಕಾಶಗಳು.

2. ಖಾಸಗಿ ವಲಯಗಳಲ್ಲಿ ಉದ್ಯೋಗಗಳು

3. ಸ್ವಯಂ ಉದ್ಯೋಗ

4. ವಿದೇಶಗಳಲ್ಲಿ ಉದ್ಯೋಗಗಳು

5. ಅವರ ಪ್ರಾವೀಣ್ಯತೆಯಲ್ಲಿ ಹೆಚ್ಚಿನ ಅಧ್ಯಯನಗಳು

ಪಾಲಿಟೆಕ್ನಿಕ್ ಕೋರ್ಸ್‌ಗಳು

ಎಸ್‌ಎಸ್‌ಎಲ್‌ಸಿ ನಂತರ ವಿದ್ಯಾರ್ಥಿಗಳು ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್, ಕಂಪ್ಯೂಟರ್, ಆಟೋಮೊಬೈಲ್ ಮುಂತಾದ ಪಾಲಿಟೆಕ್ನಿಕ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು. ಈ ಕಾಲೇಜುಗಳು 3 ವರ್ಷ, 2 ವರ್ಷ ಮತ್ತು 1 ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತವೆ. ಕಡಿಮೆ ಶುಲ್ಕ, ಕಡಿಮೆ ಅವಧಿಯಲ್ಲಿ ಉದ್ಯೋಗಗಳು 10ನೇ ತರಗತಿ ನಂತರದ ಡಿಪ್ಲೊಮಾ ಕೋರ್ಸ್‌ಗಳ ಅನುಕೂಲಗಳು.

ಪಾಲಿಟೆಕ್ನಿಕ್ ಕೋರ್ಸ್ ನಂತರ ವೃತ್ತಿ ಆಯ್ಕೆಗಳು

1. ಖಾಸಗಿ ವಲಯದ ಉದ್ಯೋಗಗಳು

2. ಸರ್ಕಾರಿ ವಲಯದ ಉದ್ಯೋಗಗಳು

3. ಉನ್ನತ ಅಧ್ಯಯನ

4. ಸ್ವಯಂ ಉದ್ಯೋಗ

5. ಸ್ವಂತ ವ್ಯಾಪಾರ

ಎಸ್‌ಎಸ್‌ಎಲ್‌ಸಿ ನಂತರ ಮಾಡಬಹುದಾದ ಡಿಪ್ಲೊಮಾ ಕೋರ್ಸ್‌ಗಳು

ಎಸ್‌ಎಸ್‌ಎಲ್‌ಸಿ ನಂತರ ವಿದ್ಯಾರ್ಥಿಗಳು ಹಲವಾರು ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಬಹುದಾಗಿದೆ. ಅವುಗಳಲ್ಲಿ ಮುಖ್ಯವಾಗಿ ಪಶುವೈದ್ಯಕೀಯ, ಮೀನುಗಾರಿಕೆ, ತೋಟಗಾರಿಕೆ, ಅರೆವೈದ್ಯಕೀಯ, ನರ್ಸಿಂಗ್ ಮತ್ತು ಮಿಡ್‌ವೈಫರಿ ಕೋರ್ಸ್‌ಗಳನ್ನು ಮಾಡಬಹುದು. ಅವುಗಳ ಕುರಿತ ವಿವರ ಇಲ್ಲಿ ನೀಡಲಾಗಿದೆ. 

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ಡಿಪ್ಲೊಮಾ ಕೋರ್ಸ್‌

ಬೀದರಿನಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪಶುಸಂಗೋಪನೆಯಲ್ಲಿ 2 ವರ್ಷ ಅವಧಿಯ ಡಿಪ್ಲೊಮಾ ಕೋರ್ಸ್‌ನಲ್ಲಿ ಶಿಕ್ಷಣ ನೀಡುತ್ತದೆ. ಎಸ್‌.ಎಸ್‌.ಎಲ್‌.ಸಿ ತೇರ್ಗಡೆಯಾದ ಹಾಗೂ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳಿಗೆ ಸೀಮಿತವಾಗಿ ನಿಗದಿತ ನಮೂನೆಗಳಲ್ಲಿ ಪ್ರತಿವರ್ಷ ಅರ್ಜಿಗಳನ್ನು ಆಹ್ವಾನಿಸುತ್ತದೆ.

ಪಶುಸಂಗೋಪನಾ ಡಿಪ್ಲೊಮಾದ ತರಗತಿಗಳ ಮಾಧ್ಯಮ ಕನ್ನಡ. ಪ್ರತಿ ಪಾಲಿಟೆಕ್ನಿಕ್‌ಗೆ ಪ್ರತ್ಯೇಕವಾದ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸದರಿ ಅರ್ಜಿಯ ನಮೂನೆಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಪ್ರವೇಶ ಪಡೆಯುವ ಎಲ್ಲಾ ಅಭ್ಯರ್ಥಿಗಳಿಗೆ ರೂ.1000/-ಗಳ ಮಾಸಿಕ ಶಿಷ್ಯ ವೇತನವನ್ನು ವ್ಯಾಸಂಗದ ಅವಧಿಯಲ್ಲಿ ನಿಯಮಾನುಸಾರ ನೀಡಲಾಗುತ್ತದೆ.

  • ಪಶುಸಂಗೋಪನಾ ಪಾಲಿಟೆಕ್ನಿಕ್, ದೋರನಹಳ್ಳಿ, ಶಹಪುರ, ಯಾದಗಿರಿ ಜಿಲ್ಲೆ
  • ಪಶುಸಂಗೋಪನಾ ಪಾಲಿಟೆಕ್ನಿಕ್, ಕೊನೇಹಳ್ಳಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ
  • ಪಶು ಸಂಗೋಪನಾ ಪಾಲಿಟೆಕ್ನಿಕ್, ಕೋರವಂಗಲ ಗೇಟ್, ಚಿಕ್ಕಕಡಲೂರು, ಹಾಸನ
  • ಪಶುಸಂಗೋಪನಾ ಪಾಲಿಟೆಕ್ನಿಕ್, ಶಿಗ್ಗಾಂವ್, ಹಾವೇರಿ ಜಿಲ್ಲೆ
  • ಪಶುಸಂಗೋಪನಾ ಪಾಲಿಟೆಕ್ನಿಕ್, ಬರಗಿ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್:

ಲಿಂಕ್‌

ತೋಟಗಾರಿಕೆ ಮೇಲ್ವಿಚಾರಕರ ಡಿಪ್ಲೊಮಾ ತರಬೇತಿ

ಡಿಪ್ಲೋಮಾ (ತೋಟಗಾರಿಕೆ) ಎರಡು ವರ್ಷದ ಕೋರ್ಸಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಅವಶ್ಯವಿರುವ ಮಾಹಿತಿ ಈ ಕೆಳಗಿನಂತಿದೆ.

• ಈ ಕೋರ್ಸ್‌ಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರಾಗಿರಬೇಕು.

• ಡಿಪ್ಲೋಮಾ (ತೋಟಗಾರಿಕೆ) ಎರಡು ವರ್ಷದ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ತೋಟಗಾರಿಕೆ ಹಾಗೂ ತೋಟಗಾರಿಕೆಗೆ ಸಂಬಂಧಪಟ್ಟ ವಿಷಯಗಳಾದ ಬೀಜೋತ್ಪಾದನೆ, ಸಸ್ಯಾಭಿವೃದ್ಧಿ ಮತ್ತು ಸಸ್ಯಪಾಲನೆ, ಅಂಗಾಂಶ ಕೃಷಿ, ಸಂರಕ್ಷಣೆ ಬೇಸಾಯ, ವಾಣಿಜ್ಯ ಪುಷ್ಪ ಬೇಸಾಯ, ಮಣ್ಣು ಮತ್ತು ನೀರು ನಿರ್ವಹಣೆ, ಖುಷಿ ತೋಟಗಾರಿಕೆ ಪದ್ಧತಿಗಳು, ಗೊಬ್ಬರಗಳ ಸಮರ್ಪಕ ಬಳಕೆ, ಸಾವಯವ ಬೇಸಾಯ ಪದ್ಧತಿಗಳು, ಸಸ್ಯ ಸಂರಕ್ಷಣೆ, ಅರ್ಥಶಾಸ್ತ್ರ, ತೋಟಗಾರಿಕೆ ವ್ಯವಹಾರ ಹಾಗೂ ನಿರ್ವಹಣೆ, ತೋಟಗಾರಿಕೆ ಉತ್ಪನ್ನಗಳ ಮೌಲ್ಯವನ್ನು ಹೆಚ್ಚಿಸುವುದು ಹಾಗೂ ವಿವಿಧ ಯಂತ್ರೋಪಕರಣಗಳು ಹಾಗೂ ಅವುಗಳ ನಿರ್ವಹಣೆ ವಿಷಯಗಳ ಬಗ್ಗೆ ಅಭ್ಯಸಿಸುತ್ತಾರೆ.

• ಈ ಕೋರ್ಸ್‌ದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ವ್ಯಾಸಂಗದಲ್ಲಿ ಶೇಕಡ 75 ರಷ್ಟು ವಿಷಯವನ್ನು ಪ್ರಾಯೋಗಿಕವಾಗಿ ಕಲಿಯುವಂತೆ ಒತ್ತು ನೀಡಲಾಗುವುದು.

• ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ 2022-23ನೇ ಸಾಲಿನಲ್ಲಿ 60 ವಿದ್ಯಾರ್ಥಿಗಳನ್ನು ಡಿಪ್ಲೋಮಾ (ತೋಟಗಾರಿಕೆ) ಎರಡು ವರ್ಷದ ಕೋರ್ಸ್‌ಗೆ ಆಯ್ಕೆ ಮಾಡಲಾಗುವುದು.

ಡಿಪ್ಲೋಮಾ (ತೋಟಗಾರಿಕೆ) ಪಡೆದವರು ಏನು ಮಾಡಬಹುದು?

ಮುಖ್ಯವಾಗಿ, ಡಿಪ್ಲೋಮಾದಲ್ಲಿ ತೇರ್ಗಡೆಯಾದವರು ತೋಟಗಾರಿಕೆಯಲ್ಲಿ ಸಶಕ್ತರಾಗಿ ನಿರತರಾಗಲು, ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ವಲಸೆ ಹೋಗುವ ಹಂಬಲವನ್ನು ನಿಯಂತ್ರಿಸುವುದರ ಜೊತೆಗೆ ಈ ಪ್ರದೇಶಗಳಲ್ಲಿ ತೋಟಗಾರಿಕೆ ಯನ್ನು ಅಭಿವೃದ್ಧಿಪಡಿಸಿ ಪ್ರಗತಿಪರ ರೈತರಾಗುವಲ್ಲಿ ನೆರವಾಗುತ್ತದೆ.

ವಿದ್ಯಾರ್ಥಿಗಳು ಗ್ರಾಮೀಣ ಮಟ್ಟದಲ್ಲಿ ತೋಟಗಾರಿಕೆ ಬೆಳೆಗಳ ಉತ್ಪಾದನೆ ಹಾಗೂ ಅವುಗಳ ಮೌಲ್ಯವರ್ಧನೆಗೆ ಸಂಬಂಧಪಟ್ಟ ತಾಂತ್ರಿಕತೆಗಳನ್ನು ರೈತರಿಗೆ ಮುಟ್ಟಿಸುವ ದಿಸೆಯಲ್ಲಿ ಮುಂಚೂಣಿಯ ಕಾರ್ಯಕರ್ತರಾಗಿ ಹೊರಹೊಮ್ಮುತ್ತಾರೆ.

ಡಿಪ್ಲೋಮಾ (ತೋಟಗಾರಿಕೆ)ಯಲ್ಲಿ ತೇರ್ಗಡೆಯಾದವರಿಗೆ ರಾಜ್ಯ ಸರಕಾರದ ಅಭಿವೃದ್ಧಿ ಇಲಾಖೆಗಳಾದ ತೋಟಗಾರಿಕೆ, ಕೃಷಿ, ಜಲಾನಯನ ಅಭಿವೃದ್ಧಿ ಹಾಗೂ ಕೃಷಿಗೆ ಸಂಬಂಧಪಟ್ಟ ನಿಗಮ/ಮಂಡಳಿಗಳು, ಕೃಷಿ/ತೋಟಗಾರಿಕೆ ವಿಶ್ವವಿದ್ಯಾಲಯಗಳು, ಬೀಜೋತ್ಪಾದನಾ ಕಂಪನಿಗಳು, ರಸಗೊಬ್ಬರ ಮತ್ತು ಕೀಟನಾಶಕ ಕಂಪನಿಗಳು, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣಾ ಘಟಕಗಳು, ಆಮದು ಮತ್ತು ರಫ್ತು ಕಂಪನಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ಮುಂತಾದಕ ಡೆಗಳಲ್ಲಿ ಉದ್ಯೋಗಾವಕಾಶಗಳ ಸೌಲಭ್ಯ ದೊರೆಯುವ ಸಾಧ್ಯತೆ ಇರುತ್ತದೆ.

• ಡಿಪ್ಲೋಮಾ (ತೋಟಗಾರಿಕೆ)ಯಲ್ಲಿ ಎರಡು ವರ್ಷದ ಕೋರ್ಸ್‌ದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ (ಹಾನ‌ರ್) ತೋಟಗಾರಿಕೆ ಪದವಿ ಪ್ರವೇಶಾತಿಯಲ್ಲಿ ಶೇಕಡಾ 5 ರಷ್ಟು ಸೀಟುಗಳನ್ನು ಸಹ ಕಾಯ್ದಿರಿಸಲಾಗಿದೆ. [ಲ್ಯಾಟ್ರಲ್’ ಎಂಟ್ರಿ ಟು ಬಿ.ಎಸ್ಸಿ (ಹಾನರ್) ತೋಟಗಾರಿಕೆ]

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಲಿಂಕ್‌ 

ಕೃಷಿ ವಿಜ್ಞಾನದಲ್ಲಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳು

ಬೆಂಗಳೂರು, ರಾಯಚೂರು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿಯಲ್ಲಿ ಎರಡು ವರ್ಷದ ಡಿಪ್ಲೊಮಾ ಮತ್ತು ಬೀಜೋತ್ಪಾದನೆ, ಸಾವಯವ ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಸಸ್ಯೋತ್ಪಾದನೆ ಹಾಗೂ ಸಸ್ಯಮಡಿ ನಿರ್ವಹಣೆ, ಹೈ-ಟೆಕ್ ಕೃಷಿ, ರೈತ ಮಹಿಳೆಯರಿಗಾಗಿ ಉದ್ದಿಮೆಗಳು, ಕಬ್ಬು ಹಾಗು ಸಕ್ಕರೆ ಗಡ್ಡೆ ಉತ್ಪಾದನೆ ತಾಂತ್ರಿಕತೆ ವಿಷಯಗಳಲ್ಲಿ ಒಂದು ಸೆಮಿಸ್ಟರ್‌ನ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು , ಎಸ್‌ಎಸ್‌ಎಲ್‌ಸಿ ಪಾಸಾದ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣವನ್ನು ಸಂಪರ್ಕಿಸಬಹುದು: ಲಿಂಕ್‌ 

ಅರೆವೈದ್ಯಕೀಯ ಕೋರ್ಸ್‌ಗಳು

ವೈದ್ಯಕೀಯ ಮತ್ತು ಆರೋಗ್ಯ ಸಂಬಂಧಿ ಕೋರ್ಸ್‌ಗಳು ದೀರ್ಘಾವಧಿಯ ಕೋರ್ಸ್‌ಗಳಾದರೂ ತಪಾಸಣೆ, ರೋಗನಿದಾನ, ಸಂವಹನ, ಕೌನ್ಸೆಲಿಂಗ್, ನರ್ಸಿಂಗ್, ಫಾರ್ಮಸಿ, ರೇಡಿಯಾಲಜಿಯಂತಹ ಅರೆವೈದ್ಯಕೀಯ ಕ್ಷೇತ್ರಗಳಲ್ಲಿ ಸರ್ಟಿಫಿಕೇಟ್/ಡಿಪ್ಲೊಮಾ ಕೋರ್ಸ್‌ಗಳಿವೆ.

ಅರೆ ವೈದ್ಯಕೀಯ ಮಂಡಳಿಯ ವ್ಯಾಪ್ತಿಗೆ ಬರುವ ಕೋರ್ಸ್‌ಗಳು:

   1. ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ (ಡಿಎಂಎಲ್ ಟಿ)

   2. ಡಿಪ್ಲೋಮಾ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ (ಡಿಎಂಐಟಿ.)

   3. ಡಿಪ್ಲೋಮಾ ಇನ್ ಹೆಲ್ತ್ ಇನ್ಸ್‍ಪೆಕ್ಟರ್ (ಡಿಎಚ್ಐ)

   4. ಡಿಪ್ಲೋಮಾ ಇನ್ ಮೆಡಿಕಲ್ ರೆಕಾಡ್ರ್ಸ್ ಟೆಕ್ನಾಲಜಿ (ಡಿಎಂಆರ್ ಟಿ)

   5. ಡಿಪ್ಲೋಮಾ ಇನ್ ಆಪರೇಷನ್ ಥಿಯೇಟರ್ ಮತ್ತು ಅನಸ್ಥೇಶಿಯಾ ಟೆಕ್ನಾಲಜಿ (ಡಿ.ಓ.ಟಿ & ಎ.ಟಿ)

   6. ಡಿಪ್ಲೋಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ (ಡಿಡಿಟಿ)

   7. ಡಿಪ್ಲೋಮಾ ಇನ್ ಆಪ್ತಾಲ್ಮಿಕ್ ಟೆಕ್ನಾಲಜಿ (ಡಿ.ಓ.ಟಿ)

   8. ಡಿಪ್ಲೋಮಾ ಇನ್ ಡೆಂಟಲ್ ಮೆಕ್ಯಾನಿಕ್ (ಡಿಡಿಎಂ)

   9. ಡಿಪ್ಲೋಮಾ ಇನ್ ಡೆಂಟಲ್ ಹೈಜೀನ್ (ಡಿಡಿಎಚ್)

ವಿವರಗಳಿಗಾಗಿ ಭೇಟಿನೀಡಿ : ಲಿಂಕ್‌ 

ಡಿಪ್ಲೊಮೊ ಇನ್ ನರ್ಸಿಂಗ್ ಅಂಡ್ ಮಿಡ್‌ವೈಫರಿ ಕೋರ್ಸ್

ಡಿಪ್ಲೊಮೊ ಇನ್ ನರ್ಸಿಂಗ್ ಅಂಡ್ ಮಿಡ್‌ವೈಫರಿ ಕೋರ್ಸ್‌ಗೆ ಪ್ರತಿ ವರ್ಷವೂ ಸರಕಾರಿ ನರ್ಸಿಂಗ್ ಶಾಲೆ ಮತ್ತು ಖಾಸಗಿ ನರ್ಸಿಂಗ್ ಶಾಲೆಗಳಲ್ಲಿನ ಸರಕಾರಿ ಕೋಟಾದ ಸೀಟುಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ ನೋಡಿ: ಲಿಂಕ್‌ 

ಅಖಿಲ ಭಾರತ ವಾಕ್-ಶ್ರವಣ ಸಂಶೋಧನಾ ಸಂಸ್ಥೆಯಲ್ಲಿ ತರಬೇತಿ

ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್-ಶ್ರವಣ ಸಂಶೋಧನಾ ಸಂಸ್ಥೆಯಲ್ಲಿ ಶ್ರವಣದೋಷ, ಮಾತಿನ ದೋಷ ಇರುವ ಮಕ್ಕಳಿಗೆ ಚಿಕಿತ್ಸೆ ಮತ್ತು ತರಬೇತಿ ನೀಡಿ ಸಾಮಾನ್ಯರಂತೆ ಬದುಕು ನಡೆಸಲು ಅವಕಾಶ ನೀಡುವ ವಿಶಿಷ್ಟ ಅಲ್ಪಾವಧಿಯ ಕೋರ್ಸ್‌ಗಳನ್ನು ಕಾಲಕಾಲಕ್ಕೆ ಆಯೋಜಿಸಲಾಗುತ್ತದೆ. ಹತ್ತು ಹದಿನೈದು ದಿನಗಳಿಂದ ಹಿಡಿದು ಆರು ತಿಂಗಳವರೆಗೆ ನಡೆಸಲಾಗುವ ಈ ಕೋರ್ಸ್‌ಗಳಿಗೆ ಅಗಾಧವಾದ ಬೇಡಿಕೆ ಇದೆ. ಇವುಗಳ ಜತೆಗೆ ಹದಿನಾಲ್ಕು ವಾರಗಳ ಸರ್ಟಿಫಿಕೇಟ್ ಕೋರ್ಸ್‌ಗಳು, ಆರು ತಿಂಗಳ ಡಿಪ್ಲೊಮಾ ಮತ್ತು ಸ್ನಾತಕೋತ್ತರ ಪದವಿಗೆ ಅವಕಾಶವಿದೆ.

ಆಡಿಯಾಲಜಿ ಡಿಪಾರ್ಟ್‌ಮೆಂಟ್‌ನಲ್ಲಿ 20 ಕೋರ್ಸ್‌ಗಳು, ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 4 ಕೋರ್ಸ್‌ಗಳು, ಸ್ಪೀಚ್ ಪೆಥಾಲಜಿ ವಿಭಾಗದಲ್ಲಿ 26, ಸ್ಪೀಚ್ ಲಾಂಗ್ವೇಜ್ ಸೈನ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ 10 ಕೋರ್ಸ್‌ಗಳು ನಿಯಮಿತವಾಗಿ ವರ್ಷವಿಡೀ ಆಯೋಜಿತವಾಗುತ್ತಿದ್ದು ಜನಸಾಮಾನ್ಯರು, ಶಿಕ್ಷಕರು, ತರಬೇತುದಾರರು, ಸ್ವಯಂ ಸೇವಕರು, ಯಾರು ಬೇಕಾದರೂ ಕಲಿತುಕೊಳ್ಳಬಹುದು.

ಹೆಚ್ಚಿನ ವಿವರಗಳಿಗಾಗಿ ನೋಡಿ: ಲಿಂಕ್‌ 

ಕೋರ್ಸ್/ವೃತ್ತಿಯನ್ನು ಆಯ್ಕೆ ಮಾಡುವುದು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವು ಕಡಿಮೆ ಅವಧಿಯಲ್ಲಿ ಯಶಸ್ಸಿನ ದೊಡ್ಡ ಎತ್ತರವನ್ನು ತಲುಪಲು ಸಹಾಯ ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಯು ತಮ್ಮ ಕೌಶಲ್ಯ, ಆಸಕ್ತಿಗಳು ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ಕ್ಷೇತ್ರವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಶುಭವಾಗಲಿ. ನಿಮ್ಮ ಕೌಶಲ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ನಿಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ. ಆಲ್ ದ ಬೆಸ್ಟ್. 

ಎಸ್ಎಸ್ಎಲ್‌ಸಿ ಬಳಿಕ ಮಾಡಬಹುದಾದ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ಜೆಒಸಿ, ಐಟಿಸಿ ಮತ್ತು ಡಿಪ್ಲೊಮಾ ಕೋರ್ಸ್‌ಗಳು ಪಿಯುಸಿಗೆ ಸಮಾನವೇ?

ಉತ್ತರ: ಹೌದು. ರಾಜ್ಯ ಸರ್ಕಾರದ ಯಾವುದೇ ಹುದ್ದೆಗೆ ಡಿಪ್ಲೊಮಾ, ಜೆಒಸಿ, ಐಟಿಐ ಅನ್ನು ದ್ವಿತೀಯ ಪಿಯುಸಿಗೆ ತತ್ಸಮಾನ ಎಂದು ಸರ್ಕಾರ ಈಗಾಗಲೆ ಆದೇಶಿಸಿದೆ. 

ಪ್ರ. 2: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದ ಆಯ್ಕೆ ಇದೆಯೇ?

ಉತ್ತರ: ಹೌದು. ವ್ಯವಹಾರ ಅಧ್ಯಯನ, ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ ಮತ್ತು ಗಣಕವಿಜ್ಞಾನ ಒಂದು ಸಂಯೋಜನೆಯಾದರೆ ಇನ್ನೊಂದು ಸಂಯೋಜನೆ ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಗಣಕ ವಿಜ್ಞಾನ. 

ಪ್ರ. 3: ಪ್ರಥಮ ಪಿಯುಸಿ ಕಲಾ ವಿಭಾಗದಲ್ಲೂ ಮನಃಶಾಸ್ತ್ರದ ಸಂಯೋಜನೆಗಳು ಯಾವುವು?

ಉತ್ತರ: ಪಿಯುಸಿಯಲ್ಲಿ ಮನಃಶಾಸ್ತ್ರದೊಂದಿಗಿನ ಸಂಯೋಜನೆಗಳು ಈ ರೀತಿ ಇವೆ: 

ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ

ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನಃಶಾಸ್ತ್ರ,     

ಐಚ್ಛಿಕ ಕನ್ನಡ, ಇತಿಹಾಸ, ಸಮಾಜಶಾಸ್ತ್ರ, ಮನಃಶಾಸ್ತ್ರ, 

ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ

ಅರ್ಥಶಾಸ್ತ್ರ, ತರ್ಕಶಾಸ್ತ್ರ, ಸಮಾಜಶಾಸ್ತ್ರ, ಮನಃಶಾಸ್ತ್ರ

ಪ್ರ. 4: ಪಿಯುಸಿ ಕಲಾ ವಿಭಾಗದಲ್ಲಿ ಮೂಲ ಗಣಿತವನ್ನು ಸಂಯೋಜನೆಯಲ್ಲಿ ಆಯ್ಕೆ ಮಾಡಿಕೊಳ್ಳಬಹುದೇ?

ಉತ್ತರ: ಹೌದು. ಮೂಲಗಣಿತದ ವಿಷಯವುಳ್ಳ ಸಂಯೋಜನೆಯನ್ನು ಈ ಕೆಳಕಂಡಂತೆ ಆಯ್ಕೆ ಮಾಡಿಕೊಳ್ಳಬಹುದು.

ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಮೂಲಗಣಿತ,

ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮೂಲಗಣಿತ

ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಮೂಲಗಣಿತ

ಪ್ರ. 5: ಡಿಪ್ಲೊಮಾ ಪ್ರವೇಶಕ್ಕೆ ಇರಬೇಕಾದ ಅರ್ಹತೆ ಏನು?

ಉತ್ತರ: ಕರ್ನಾಟಕ SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಟ್ಟಾರೆಯಾಗಿ ಕನಿಷ್ಠ ಶೇ.35 ಅಂಕಗಳನ್ನು ಕಡ್ಡಾಯವಾಗಿ ಪಡೆದಿರಬೇಕು.

ಎಸ್‌ಎಸ್‌ಎಲ್‌ಸಿ ಬಳಿಕ ಮಾಡಬಹುದಾದ ಟಾಪ್ 5 ಕೋರ್ಸ್‌ಗಳು ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಎಸ್‌ಎಸ್‌ಎಲ್‌ಸಿ ಬಳಿಕ ಮಾಡಬಹುದಾದ ಟಾಪ್ 5 ಕೋರ್ಸ್‌ಗಳು” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ